ನವದೆಹಲಿ: ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ತಂದುಕೊಟ್ಟ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಸೇರಿದಂತೆ ಹಲವಾರು ಮಂದಿ ಗಣ್ಯರು ಶ್ವಾಗತ ಕೋರಿದ್ದಲ್ಲದೇ ಸನ್ಮಾನ ಮಾಡಿ ಗೌರವಿಸಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತೀಯ ಶಟ್ಲರ್ ಟೋಕಿಯೋದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಒಲಿಂಪಿಕ್ಸ್ನಲ್ಲಿ 2 ಪದಕ ಗೆದ್ದ 2ನೇ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಂದು ಟೋಕಿಯೋದಿಂದ ನವದೆಹಲಿಯಿಂದ ಆಗಮಿಸಿದ ಸಿಂಧು ಮತ್ತು ಅವರ ಕೋಚ್ ಅವರನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಅಜಯ್ ಸಿಂಗಾನಿಯಾ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಬರ ಮಾಡಿಕೊಂಡರು.
ನಂತರ ಸಿಂಧು ಹಾಗೂ ಕೋಚ್ ಪರ್ಕ್ ಟೇ ಸಾಂಗ್ ಅವರನ್ನು ಕ್ರೀಡಾ ಸಚಿವಾ ಅನುರಾಗ್ ಠಾಕೂರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈಶಾನ್ಯ ಪ್ರದೇಶದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಜಿ ಕಿಶನ್ ರೆಡ್ಡಿ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಿಸಿತ್ ಪ್ರಾಮಾಣಿಕ್ ಸೇರಿದಂತೆ ಕ್ರೀಡಾ ಸಚಿವಾಲಯದ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್, ಪಿವಿ ಸಿಂಧು ಭಾರತದ ಶ್ರೇಷ್ಠ ಒಲಿಂಪಿಯನ್. ಅವರು ಭಾರತದ ಐಕಾನ್ ಮತ್ತು ದೇಶಕ್ಕಾಗಿ ಆಡಬೇಕು ಎಂದು ಬಯಸುವ ಯುವಪೀಳಿಗೆಯ ಕನಸಿಗೆ ಸ್ಪೂರ್ತಿಯಾಗಿದ್ದಾರೆ. ಒಲಿಂಪಿಕ್ಸ್ನಲ್ಲಿ ಸತತ ಎರಡು ಪದಕಗಳನ್ನು ಗೆದ್ದಿರುವುದು ಅವರ ನಂಬಲಸಾಧ್ಯವಾದ ಸಾಧನೆಯಾಗಿದೆ. ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್(TOPS)ನ ಯೋಜನೆ ಹೇಗೆ ಕ್ರೀಡಾಪಟುಗಳನ್ನು ಪೋಷಿಸಿದೆ ಎಂಬುದನ್ನು ಸಿಂಧು ಅವರ ಯಶಸ್ಸು ತೋರಿಸುತ್ತದೆ ಎಂದು ಹೇಳಿದ ಅವರು ಸಿಂಧು ಅವರ ಬೆನ್ನಿಗೆ ನಿಂತು ಅವರ ಸಾಧನೆಗಾಗಿ ತ್ಯಾಗ ಮಾಡಿರುವ ಪೋಷಕರಿಗೆ ಧನ್ಯವಾದ ಅರ್ಪಿಸಿದರು.