ನವದೆಹಲಿ:ಟೋಕಿಯೋ ಒಲಿಂಪಿಕ್ಸ್ನ ವೇಟ್ ಲಿಫ್ಟಿಂಗ್ನಲ್ಲಿ(ಭಾರ ಎತ್ತುವ ಸ್ಪರ್ಧೆ) ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಮೀರಾಬಾಯಿ ಚನು ಇದೀಗ ಭಾರತಕ್ಕೆ ಆಗಮಿಸಿದ್ದಾರೆ. ಜಪಾನ್ನಿಂದ ನೇರವಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಾಧಕಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಚನು ಅವರಿಗೆ ಏರ್ಪೋರ್ಟ್ನಲ್ಲೇ ಆರ್ಟಿ-ಪಿಸಿಆರ್ ಪರೀಕ್ಷೆಗೊಳಪಡಿಸಲಾಯಿತು. ಇದಾದ ಬಳಿಕ ಬಿಗಿ ಭದ್ರತೆಯಲ್ಲಿ ಅವರನ್ನು ತವರಿಗೆ ಕಳುಹಿಸಿಕೊಡಲಾಗಿದೆ. 2000ರಲ್ಲಿ ನಡೆದಿದ್ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಇದಾದ ಬಳಿಕ ಮೀರಾಬಾಯಿ ಚನು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: 13ನೇ ವಯಸ್ಸಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಾಲಕಿ!
ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಗೌರವ
ಬೆಳ್ಳಿ ಪದಕ ಗೆದ್ದು ಇತಿಹಾಸ ರಚನೆ ಮಾಡಿರುವ ಚನುಗೆ ಈಗಾಗಲೇ ಮಣಿಪುರ ಸರ್ಕಾರ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕ್ರೀಡಾ ಕೋಟಾದಲ್ಲಿ ಅವರಿಗೆ ಹೆಚ್ಚುವರಿ ಪೊಲೀಸ್ ಅಧಿಕ್ಷಕಿ ಸ್ಥಾನ ನೀಡಲಾಗಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಈ ಮಾಹಿತಿ ಹೊರಹಾಕಿದ್ದಾರೆ.