ಟೋಕಿಯೋ (ಜಪಾನ್):ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಟಿ-74 ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆಲ್ಲುವ, ಭಾರತಕ್ಕೆ ಮತ್ತೊಂದು ಪದಕ ತಂದಕೊಟ್ಟಿದ್ದಾರೆ. ಇವರು 2.07 ಮೀಟರ್ನಷ್ಟು ಎತ್ತರ ಹಾರುವಲ್ಲಿ ಯಶಸ್ವಿಯಾಗಿದ್ದು, ಹೊಸ ಏಷ್ಯನ್ ರೆಕಾರ್ಡ್ ಬರೆದಿದ್ದಾರೆ.
ಈವರೆಗೆ ಭಾರತ ಒಟ್ಟು 11 ಪದಕಗಳ ಮುಡಿಗೇರಿಸಿಕೊಂಡಿದ್ದು, ಪದಕ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದೆ. ಇತ್ತ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಭಾರತದಲ್ಲಿ ಶುಭಾಶಯಗಳು ಹರಿದು ಬರುತ್ತಿವೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ನಮ್ಮ ಹೆಮ್ಮೆ. ಈ ಪದಕವು ಅವರ ಕಠಿಣ ಪರಿಶ್ರಮ ಮತ್ತು ಅಪ್ರತಿಮ ಸಮರ್ಪಣೆಯ ಫಲಿತಾಂಶವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ.
ಭಾರತ ತಂಡ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ಟ್ವಿಟರ್ನಲ್ಲಿ ಅಭಿನಂದಿಸಿದ್ದು, ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಹಾಗೂ ಏಷ್ಯನ್ ದಾಖಲೆ ನಿರ್ಮಿಸಿದ ಪ್ರವೀಣ್ ಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.
ಇವರಲ್ಲದೆ ಚಿನ್ನದ ಹುಡುಗ ಅಭಿನವ್ ಬಿಂದ್ರಾ ಸಹ ಟ್ವೀಟ್ ಮಾಡಿ ಅಭಿನಂದಿಸಿದ್ದು, ವಯಸ್ಸಿನ್ನೂ 18 ಆಗಲೇ ಒಲಿಂಪಿಕ್ ಪದಕ..! ಪುರುಷರ ಹೈಜಂಪ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್ಗೆ ಅಭಿನಂದನೆಗಳು ಎಂದಿದ್ದಾರೆ.