ಟೋಕಿಯೋ:ಟೋಕಿಯೊ ಒಲಿಂಪಿಕ್ಸ್ನಲ್ಲಿ ಗ್ರೇಟ್ ಬ್ರಿಟನ್‌ನ ಕ್ರೀಡಾಪಟು ಕ್ಯಾಟರೀನಾ ಜಾನ್ಸನ್ ಥಾಂಪ್ಸನ್ ಪದಕದ ಕನಸು ಭಗ್ನವಾಗಿದೆ. ಹೆಪ್ಟಾಥ್ಲಾನ್ 200 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ಯಾಟರೀನಾ ಸ್ಪರ್ಧೆ ವೇಳೆ ಕುಸಿದು ಬಿದ್ದಿದ್ದಾರೆ. ಆದರೂ ರೇಸ್ ಪೂರ್ಣಗೊಳಿಸಿದ್ದಾರೆ.
ಹಲವು ತಿಂಗಳುಗಳಿಂದ ಅಕಿಲ್ಸ್ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದ ಕ್ಯಾಟರೀನಾ ಕುಸಿದು ಬಿದ್ದಾಗ ಆಕೆಯ ಸಹಾಯಕ್ಕೆ ವೈದ್ಯಕೀಯ ಸಿಬ್ಬಂದಿ ಬಂದರು. ಗಾಲಿಕುರ್ಚಿಯನ್ನೂ ನೀಡಿದರು. ಆದರೂ ವಿಶ್ವ ಚಾಂಪಿಯನ್ ಕ್ಯಾಟರೀನಾ ನೋವಿನಲ್ಲೂ ಎದ್ದು ನಿಂತು, ಕುಂಟುತ್ತಲೇ ರೇಸ್ನ ಅಂತಿಮ ಗೆರೆಯನ್ನು ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಹೆಪ್ಟಾಥ್ಲಾನ್ - ಇದು ಒಂದು ಅಥ್ಲೆಟಿಕ್ ಕ್ರೀಡಾಕೂಟವಾಗಿದ್ದು, ನಿರ್ದಿಷ್ಟವಾಗಿ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ಪ್ರತಿ ಸ್ಪರ್ಧಿಗಳೂ 100 ಮೀಟರ್ ಹರ್ಡಲ್ಸ್, ಎತ್ತರ ಜಿಗಿತ, ಶಾಟ್-ಪುಟ್, 200 ಮೀಟರ್ ಓಟ, ಲಾಂಗ್ ಜಂಪ್, ಜಾವೆಲಿನ್ ಮತ್ತು 800 ಮೀಟರ್ ಓಟ ಹೀಗೆ 7 ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಇದನ್ನೂ ಓದಿ: ದಹಿಯಾಗೆ 4 ಕೋಟಿ ರೂ., ಸರ್ಕಾರಿ ಕೆಲಸ, ಪ್ಲಾಟ್ ಜೊತೆ ಗ್ರಾಮದಲ್ಲೇ ಒಳಾಂಗಣ ಕ್ರೀಡಾಂಗಣ!
28 ವರ್ಷದ ಕ್ಯಾಟರೀನಾ ಜಾನ್ಸನ್ ಥಾಂಪ್ಸನ್ 2019ರ ವಿಶ್ವ ಚಾಂಪಿಯನ್ನಲ್ಲಿ ಇಂಗ್ಲೆಂಡ್ ದಾಖಲೆಯನ್ನು ಮುರಿದು ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದರು. ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಆಸೆಯಿಟ್ಟುಕೊಂಡಿದ್ದರು.