ಟೋಕಿಯೋ: ಒಲಿಂಪಿಕ್ಸ್ ಪುರುಷರ ಹಾಕಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತ 5-2 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.
ಮೊದಲ ಕ್ವಾರ್ಟರ್ನಲ್ಲಿ ಎರಡನೇ ನಿಮಿಷಕ್ಕೆ ಮೊದಲ ಗೋಲು ಹೊಡೆಯುವ ಮೂಲಕ ಬೆಲ್ಜಿಯಂನ ಫ್ಯಾನಿ ಲಾಯಿಕ್ ಲುಯಾಪರ್ಟ್ ಪೆನಾಲ್ಟಿ ಕಾರ್ನರ್ನಲ್ಲಿ ತಮ್ಮ ತಂಡದ ಖಾತೆ ತೆರೆದರು.
ಆದರೆ, ಭಾರತ ತಂಡಕ್ಕೆ ನಿರಾಶೆಯಾಗಲಿಲ್ಲ. ಟೀಂ ಇಂಡಿಯಾದ ಹರ್ಮನ್ ಪ್ರೀತ್ ಸಿಂಗ್ ಕೂಡ ಪೆನಾಲ್ಟಿ ಕಾರ್ನರ್ನಲ್ಲಿ ತಮ್ಮ ತಂಡದ ಪರವಾಗಿ ಮೊದಲ ಗೋಲು ಹೊಡೆಯುವ ಮೂಲಕ ಉತ್ತಮ ಆರಂಭ ಮಾಡಿದರು. ಮೊದಲ ಕ್ವಾರ್ಟರ್ ಅಂತ್ಯಕ್ಕೆ 2-1 ಗೋಲುಗಳ ಅಂತರಲ್ಲಿ ಭಾರತ ಮುನ್ನಡೆ ಸಾಧಿಸಿತು.
ಎರಡನೇ ಕ್ವಾರ್ಟರ್ ನಲ್ಲಿ ಬೆಲ್ಜಿಯಂ ತಂಡ 1 ನಿಮಿಷ 4 ಸೆಕೆಂಡುಗಳಲ್ಲಿ ಪೆನಾಲ್ಟಿ ಕಾರ್ನರ್ನಲ್ಲಿ ಗೋಲ್ ದಾಖಲಿಸಿತು. ಭಾರತದ ಹರ್ಮನ್‍ಪ್ರೀತ್ ಕೂಡ 7 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಹೊಡೆದು ತಂಡಕ್ಕೆ ನೆರವಾದರು. ಬಳಿಕ 8ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಬ್ಯಾಕ್‍ಹ್ಯಾಂಡ್ ಶಾಟ್ ಮೂಲಕ ಗೋಲ್ ಹೊಡೆದರು. ಇದರಿಂದಾಗಿ ಭಾರತ 2-1ರ ಮುನ್ನಡೆ ಕಾಯ್ದುಕೊಂಡಿತು.
ಬಳಿಕ ಬೆಲ್ಜಿಯಂ ಕೂಡ ಪೆನಾಲ್ಟಿ ಕಾರ್ನರ್ ಲಾಭ ಪಡೆಯಿತು. ವಿಶ್ವದ ಬೆಸ್ಟ್ ಡ್ರ್ಯಾಗ್ ಫ್ಲಿಕರ್ಸ್ ಬೆಲ್ಜಿಯಂನ ಹ್ಯಾಂಡ್ರಿಕ್ಸ್ ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಗೋಲ್ ಹೊಡೆದರು. ಈ ಮೂಲಕ ಎರಡೂ ತಂಡಗಳು 2-2 ರ ಸಮಬಲ ಸಾಧಿಸಿತು.
ಮೂರನೇ ಕ್ವಾರ್ಟರ್ ನಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಬಳಸಿಕೊಳ್ಳುವಲ್ಲಿ ಟೀಂ ಇಂಡಿಯಾ ವಿಫಲವಾಯ್ತು. ಆಟ ಮುಂದುವರೆದು, ನಾಲ್ಕನೇಯ ಕ್ವಾರ್ಟರ್ ನಲ್ಲಿ ಬೆಲ್ಜಿಯಂ ಎರಡು ಗೋಲ್ ದಾಖಲಿಸುವ ಮೂಲಕ ಮುನ್ನಡೆದ ಸಾಧಿಸಿತು. ನಾಲ್ಕನೇ ಕ್ವಾರ್ಟರ್ ನಲ್ಲಿ 49ನೇ ನಿಮಿಷ ಮತ್ತು 53 ನಿಮಿಷದಲ್ಲಿ ಹ್ಯಾಂಡ್ರಿಕ್ಸ್ ಗೋಲ್ ದಾಖಲಿಸಿದರು. ಪಂದ್ಯದ ಅಂತ್ಯಕ್ಕೆ 5-2 ಗೋಲುಗಳ ಅಂತರದಲ್ಲಿ ಭಾರತ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿತು.
49 ವರ್ಷಗಳ ಬಳಿಕ ಚಿನ್ನದ ಕನಸು ಭಗ್ನ
ಇದಕ್ಕೂ ಮೊದಲು 49 ವರ್ಷಗಳ ಹಿಂದೆ 1972ರಲ್ಲಿ ಮ್ಯೂನಿಚ್ನಲ್ಲಿ ನಡೆದಿದ್ದ ಒಲಿಂಪಿಕ್‌ನಲ್ಲಿ ಭಾರತ ಹಾಕಿ ತಂಡ ಸೆಮಿಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ 2-0 ಗೋಲುಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು. ಇದಾದ ನಂತರ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು.
ಆದರೆ, 41 ವರ್ಷದ ಹಿಂದೆ 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್‌ನಲ್ಲಿ ಕೇವಲ 6 ತಂಡಗಳಿದ್ದ ಕಾರಣ ಸೆಮಿಫೈನಲ್ ಹಂತ ಇಲ್ಲದೆಯೇ ಫೈನಲ್ ಪ್ರವೇಶಿಸಿತ್ತು. ಜೊತೆಗೆ ಅಂದು ಚಿನ್ನಕ್ಕೆ ಕೊರೊಳೊಡ್ಡಿತ್ತು. ಇದೀಗ ಮತ್ತೆ 49 ವರ್ಷದ ನಂತರ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತು, ಮತ್ತೆ ಪದಕ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರ, ಸೆಮಿಸ್ನಲ್ಲಿ ಸಾಕಷ್ಟು ಪ್ರಯತ್ನಪಟ್ಟರೂ ಬಲಿಷ್ಠ ಬೆಲ್ಜಿಯಂ ವಿರುದ್ಧ ಭಾರತಕ್ಕೆ ಗೆಲ್ಲಲಾಗಲಿಲ್ಲ. ಈ ಮೂಲಕ ನಾಲ್ಕು ದಶಕಗಳ ಬಳಿಕ ಚಿನ್ನ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. ಭಾರತೀಯ ಹಾಕಿ ತಂಡ ಮುಂದೆ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದೆ.