ಹೈದರಾಬಾದ್:ಭಾರತೀಯ ಪುರುಷರ ಹಾಕಿ ತಂಡದ ಅನುಭವಿ ಆಟಗಾರ ರೂಪಿಂದರ್ ಪಾಲ್ ಸಿಂಗ್ (30) ಅವರು ಇಂದು (ಸೆ. 30 ಗುರುವಾರ) ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಯುವ ಆಟಗಾರರಿಗೆ ದಾರಿ ಮಾಡಿಕೊಡುವ ಸಲುವಾಗಿ ಈ ಮಾರ್ಗ ಆರಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಂಚು ತಂದುಕೊಟ್ಟ ಹಾಕಿ ಆಟಗಾರ ರೂಪಿಂದರ್ ಪಾಲ್ ಸಿಂಗ್ ನಿವೃತ್ತಿ ಘೋಷಣೆ - ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಹಾಗೂ ಭಾರತೀಯ ಹಾಕಿ ಆಟಗಾರ ರೂಪಿಂದರ್ ಪಾಲ್ ಸಿಂಗ್ ಅವರು ನಿವೃತ್ತಿ ಘೋಷಿಸಿದ್ದಾರೆ. ಯುವ ಆಟಗಾರರಿಗೆ ದಾರಿ ಮಾಡಿಕೊಡಲು ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಘೋಷಿಸಿರುವುದಾಗಿ ಅವರು ತಿಳಿಸಿದ್ದಾರೆ.
ರೂಪಿಂದರ್ ಪಾಲ್ ಸಿಂಗ್ ಇತ್ತೀಚಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡದ ಪರವಾಗಿ ಆಕರ್ಷಕ ಆಟ ಆಡಿದ್ದರು. ಇವರ ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡವು ಸ್ಪೇನ್ ವಿರುದ್ಧ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು.
41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಹಾಕಿ ಪುರುಷರು ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಲ್ಲದೇ ಕಂಚು ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚು ಗೆದ್ದ ದಿನದಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇದು ನನ್ನ ವೃತ್ತಿ ಜೀವನದ ಅತ್ಯುತ್ತಮ ದಿನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.