ನವದೆಹಲಿ:ಪದಕ ಗೆಲುವ ಮಹದಾಸೆಯೊಂದಿಗೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ವಿಶ್ವ ಚಾಂಪಿಯನ್ ಮೇರಿ ಕೋಮ್ 16ನೇ ಸುತ್ತಿನಲ್ಲಿ ಸೋತು ನಿರಾಸೆ ಅನುಭವಿಸಿದ್ದರು. ಪಂದ್ಯದಲ್ಲಿ ತಮಗೆ ಮೋಸವಾಗಿದೆ ಎಂದು ಹೇಳಿಕೊಂಡಿದ್ದ ಅಥ್ಲೀಟ್ಸ್ ಇಂದು ಭಾರತಕ್ಕೆ ವಾಪಸ್ ಆಗಿದ್ದಾರೆ.
ಪದಕ ರಹಿತವಾಗಿ ಬಂದಿದ್ದಕ್ಕೆ ಕ್ಷಮೆ ಕೋರುವೆ ತವರಿಗೆ ಆಗಮಿಸುತ್ತಿದ್ದಂತೆ ಒಲಿಂಪಿಕ್ಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿರುವ ಬಾಕ್ಸರ್ ಮೇರಿ ಕೋಮ್, ಪಂದ್ಯದ ವೇಳೆ ನನಗೆ ಮೋಸ ಮಾಡಿದ್ದಾರೆ. ಮೊದಲ ಹಾಗೂ ಎರಡನೇ ರೌಂಡ್ಸ್ನಲ್ಲಿ ಗೆಲುವು ಸಾಧಿಸಿದ್ದೇನೆ. ಆದರೂ ಸೋತಿದ್ದಾಗಿ ತೀರ್ಪು ನೀಡಿದ್ದಾರೆ. ಈ ಪಂದ್ಯದಲ್ಲಿ ನಾನು ಸೋಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಪಂದ್ಯ ಆಡುವುದಕ್ಕೂ ಮೊದಲು ರಿಂಗ್ ಪ್ರವೇಶ ಮಾಡುವಾಗ ಅಲ್ಲಿನ ಅಧಿಕಾರಿಗಳು ಬಂದು ನನಗೆ ಮಾನಸಿಕ ಕಿರುಕುಳ ನೀಡಿದರು. ನಿಮ್ಮ ದೇಶದ ಜರ್ಸಿ ಹಾಕಿಕೊಳ್ಳುವಂತಿಲ್ಲ ಎಂದರು. ಆದರೆ, ಮೊದಲ ಪಂದ್ಯದಲ್ಲಿ ನಾನು ಇದೇ ಜರ್ಸಿ ಹಾಕಿಕೊಂಡು ಕಣಕ್ಕಿಳಿದಿದ್ದೆ. ಈ ವೇಳೆ, ಯಾರೂ ಕೂಡ ನನಗೆ ಪ್ರಶ್ನೆ ಮಾಡಿರಲಿಲ್ಲ. 16ನೇ ಸುತ್ತಿನ ಪಂದ್ಯದ ವೇಳೆ ನಾನು ಬಾಕ್ಸಿಂಗ್ಗೆ ಬಳಕೆ ಮಾಡುವ ಕಿಟ್ ತಪಾಸಣೆ ನಡೆಸಿದರು. ಈ ಮೂಲಕ ಮಾನಸಿಕ ಕಿರುಕುಳ ನೀಡಿದ್ದರು. ಆದರೆ, ಬೇರೆ ದೇಶದ ಯಾವುದೇ ಅಥ್ಲೀಟ್ಸ್ಗಳ ಜೊತೆ ಈ ರೀತಿಯಾಗಿ ನಡೆದುಕೊಂಡಿಲ್ಲ ಎಂದು ಮೇರಿ ಕೋಮ್ ಆರೋಪಿಸಿದ್ದಾರೆ.
ಪದಕ ರಹಿತವಾಗಿ ಭಾರತಕ್ಕೆ ಬಂದಿರುವುದು ನನಗೆ ಕೆಟ್ಟ ಭಾವನೆ ಮೂಡಿಸಿದೆ. ಪದಕದೊಂದಿಗೆ ದೇಶಕ್ಕೆ ಮರಳುವ ಕನಸು ಇಟ್ಟುಕೊಂಡಿದ್ದೆ. ಅದಕ್ಕಾಗಿ ಇಡೀ ದೇಶದಿಂದ ನನಗೆ ಬೆಂಬ ವ್ಯಕ್ತವಾಗಿತ್ತು. ಇದಕ್ಕೆ ನಾನು ಋಣಿಯಾಗಿರುವೆ ಎಂದಿದ್ದಾರೆ. ಸದ್ಯ ನನಗೆ 38 ವರ್ಷ ವಯಸ್ಸಾಗಿದ್ದು, 40 ವರ್ಷದವರೆಗೆ ಬಾಕ್ಸಿನ್ನಲ್ಲಿ ಭಾಗಿಯಾಗುತ್ತೇನೆ ಎಂದು ಮೇರಿ ಕೋಮ್ ಇದೇ ವೇಳೆ ಹೇಳಿದ್ದಾರೆ.