ಟೋಕಿಯೋ ಒಲಿಂಪಿಕ್ಸ್ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಬಂಗಾರದ ಪದಕ ಗೆದ್ದು ಹರಿಯಾಣದ ಪಾಣಿಪತ್ ಮೂಲದ ನೀರಜ್ ಚೋಪ್ರಾ ಇತಿಹಾಸ ಬರೆದಿದ್ದಾರೆ. ಈ ಐತಿಹಾಸಿಕ ವಿಜಯದ ಮೂಲಕ ನೀರಜ್ ಚೋಪ್ರಾ 2020ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶದ 7ನೇ ಪದಕ ಮತ್ತು ಮೊದಲ ಚಿನ್ನ ಗೆದ್ದರು.
ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಮೊಟ್ಟ ಮೊದಲು ತರಬೇತಿ ನೀಡಿದ್ದು, ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ ಕಾಶಿನಾಥ ನಾಯ್ಕ್ ಎಂಬ ವಿಷಯ ಈಗಾಗಲೇ ಮನೆಮಾತಾಗಿದೆ. ಆದರೆ ನೀರಜ್ರ ಸಾಧನೆ ಹಿಂದಿರುವ ಬಹುದೊಡ್ಡ ಶಕ್ತಿ ಎಂದರೆ ಅವರ ಕೋಚ್ ಉವೆ ಹೊನ್.
ಇದನ್ನೂ ಓದಿ:ಅಥ್ಲೆಟಿಕ್ಸ್ನಲ್ಲಿ 2 ಬಾರಿ ಕೈತಪ್ಪಿದ್ದ ಪದಕ... 3ನೇ ಬಾರಿ 100 ವರ್ಷಗಳ ಭಾರತೀಯರ ಕನಸು ನನಸು ಮಾಡಿದ ನೀರಜ್ ಚೋಪ್ರಾ
ಯಾರಿವರು ಉವೆ ಹೊನ್?
ಉವೆ ಹೊನ್, ಜರ್ಮನಿಯ ಮಾಜಿ ಕ್ರೀಡಾಪಟು. ಪ್ರಸ್ತುತ ನೀರಜ್ ಚೋಪ್ರಾಗೆ ತರಬೇತುದಾರ, ಮಾರ್ಗದರ್ಶಕರಾಗಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದ ಉವೆ ಹೊನ್ 104.80 ಮೀಟರ್ ಜಾವೆಲಿನ್ ಎಸೆತಕ್ಕಾಗಿ 'ಶಾಶ್ವತ ವಿಶ್ವ ದಾಖಲೆ' ಹೊಂದಿದ್ದಾರೆ. ಅಲ್ಲದೇ 100 ಮೀಟರ್ ದಾಟಿದ ಏಕೈಕ ಸ್ಪರ್ಧಿ ಕೂಡ ಆಗಿದ್ದಾರೆ. ಆದರೆ ಇವರು ಜಾವೆಲಿನ್ನ ಹಳೆಯ ವಿನ್ಯಾಸದೊಂದಿಗೆ ಈ ಸಾಧನೆಯನ್ನು ಮಾಡಿದ್ದಾರೆ. 1986 ರಿಂದ ಹೊಸ ಜಾವೆಲಿನ್ ವಿನ್ಯಾಸ ಜಾರಿಗೆ ಬಂದಿದ್ದು, ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ.
ಉವೆ ಹೊನ್ ಅವರು ಚಿಕ್ಕ ವಯಸ್ಸಿನಿಂದಲೇ ಜಾವೆಲಿನ್ ಥ್ರೋನಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಾ ಬಂದಿದ್ದು, 1981ರ ಯುರೋಪಿಯನ್ ಜೂನಿಯರ್ ಚಾಂಪಿಯನ್‌ಶಿಪ್ ಕಿರೀಟ ಮುಡಿಗೇರಿಸಿಕೊಂಡಿದ್ದರು. 1982ರ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದಿದ್ದರು. 1985 ರಲ್ಲಿ IAAF ವಿಶ್ವಕಪ್ ಮತ್ತು ಯುರೋಪಿಯನ್ ಕಪ್ ಗೆದ್ದಿದ್ದರು. ಆದರೆ 1986ರಲ್ಲಿ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಸ್ಪರ್ಧಾತ್ಮಕ ಕ್ರೀಡಾ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಅವರು ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:ಭಾರತ 'ಸ್ವರ್ಣ'ಮಯವಾಗಿಸಿದ ಸುಬೇದಾರ್ ನೀರಜ್ಗೆ ಕನ್ನಡಿಗನೇ ಗುರು 'ದ್ರೋಣಾಚಾರ್ಯ'..
1999ರಿಂದ ವೃತ್ತಿಪರ ತರಬೇತುದಾರರಾಗಿರುವ ಉವೆ ಹೊನ್, ಚೀನಾದ ರಾಷ್ಟ್ರೀಯ ಚಾಂಪಿಯನ್ ಕಿಂಗ್‌ಗ್ಯಾಂಗ್‌ಗೆ ತರಬೇತಿ ನೀಡಿದ್ದಾರೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಜೊತೆ ಒಪ್ಪಂದಕ್ಕೆ ಸಹಿ ಹಾಕಿ, ಪ್ರಸ್ತುತ ನೀರಜ್ ಚೋಪ್ರಾ ಸೇರಿದಂತೆ ಭಾರತೀಯ ಜಾವೆಲಿನ್ ತಂಡಕ್ಕೆ ಕೋಚ್ ಆಗಿದ್ದಾರೆ. ಇದೀಗ ಇವರ ಶ್ರಮಕ್ಕೆ ಇವರ ಶಿಷ್ಯ ನೀರಜ್ ಚೋಪ್ರಾ ಒಲಿಂಪಿಕ್ಸ್ನಲ್ಲಿ ಬಂಗಾರ ಗೆದ್ದು ಇವರ ಕೀರ್ತಿ ಹೆಚ್ಚಿಸಿದ್ದಾರೆ.