ಶ್ರೀಗಂಗಾನಗರ(ರಾಜಸ್ಥಾನ್): ಭಾರತದ ಪ್ಯಾರಾ ಶೂಟರ್ ಅವನಿ ಲೇಖಾರಾ ಸೋಮವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ನ 10 ಮೀಟರ್ ಏರ್ ರೈಫಲ್ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇದು ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳಾ ಕ್ರೀಡಾಪಟು ಗೆದ್ದ ಮೊದಲ ಚಿನ್ನದ ಪದಕವಾಗಿದೆ.
ಅವನಿ 10 ಮೀಟರ್ ಏರ್ ರೈಫಲ್ ಎಸ್ಹೆಚ್1 ವಿಭಾಗದಲ್ಲಿ 249.6 ಅಂಕ ಗಳಿಸಿ ಸ್ವರ್ಣ ಗೆದ್ದರು. 19 ವರ್ಷದ ಶೂಟರ್ ಚಿನ್ನದ ಜೊತೆಗೆ ಪ್ಯಾರಾಲಿಂಪಿಕ್ಸ್ನಲ್ಲಿ ವಿಶ್ವದಾಖಲೆ ಸರಿಗಟ್ಟಿದರು.
ಅವನಿ ತಂದೆ ಪ್ರವೀಣ್ ಲೇಖಾರಾ ಸಂದರ್ಶನ ಕೇವಲ 11 ವರ್ಷದವಳಿದ್ದಾಗ ಸಂಭವಿಸಿದ ಕಾರು ಅಪಘಾತ ಅವನಿಯ ಜೀವನವನ್ನು ನಿಶ್ಚಲಗೊಳಿಸಿತು. ಆದರೆ, ಈ ದುರಂತ ಅವರ ಜೀವನದಲ್ಲಿ ಏನೂ ಮಾಡಲಾಗದ ಸ್ಥಿತಿಗೆ ದೂಡಿತ್ತು. ಆದರೆ, ಅವರು ಕುಟುಂಬದವರ ಬೆಂಬಲದಿಂದಾಗಿ ಅವನಿ ಅವರನ್ನು ಇಂದು ವಿಶ್ವಮಟ್ಟದಲ್ಲೇ ಮಿಂಚುವಂತೆ ಮಾಡಿದೆ.
2012ರಲ್ಲಿ ನಡೆದಿದ್ದ ಅಪಘಾತದಿಂದ ಲೇಖಾರಾ ಕೆಲವು ಬೆನ್ನು ಹುರಿ (ಸ್ಪೈನಲ್ ಕಾರ್ಡ್ ಇಂಜುರಿ)ಗಾಯಗಳಾಗಿ ಸೊಂಟದ ಕೆಳಗಿನ ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಆದರೆ, ಜೀವನದಲ್ಲಿ ಸಾಧನೆ ಮಾಡುವ ಹಂಬಲದಿಂದ ಮತ್ತು ತನ್ನ ತಂದೆಯ ಒತ್ತಾಯದಿಂದ ಶೂಟಿಂಗ್ ಕೋರ್ಸ್ ತೆಗೆದುಕೊಂಡಿದ್ದ ಜೈಪುರದ ಯುವತಿ ಇಂದು ಭಾರತದ ಮನೆ ಮಾತಾಗಿದ್ದಾರೆ.
ತಮ್ಮ ಮಗಳ ಸಾಧನೆಯ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ಅವರ ತಂದೆ ಪ್ರವೀಣ್ ಕುಮಾರ್, ಪ್ಯಾರಾಲಿಂಪಿಕ್ಸ್ ಅಥ್ಲೀಟ್ಗಳು ನಿಜ ಜೀವನದ ಹೀರೊಗಳು ಎಂದು ತಮ್ಮ ಮಗಳ ಸಾಧನೆ ಕೊಂಡಾಡಿದ್ದಾರೆ. ಅವನಿ ಅವಳ ಕ್ರೀಡೆಯಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾಳೆ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ತರಬೇತಿ ಮಾಡುತ್ತಿದ್ದಳು. ಈ ಫಲಿತಾಂಶ ಆ ಕಠಿಣ ಪರಿಶ್ರಮದ ಪ್ರತಿಫಲವಾಗಿ ಹೊರಹೊಮ್ಮಿದೆ.
ಒಲಿಂಪಿಕ್ಸ್ ಕ್ರೀಡಾಪಟುಗಳು ಪದಕ ಗೆಲ್ಲುತ್ತಿದ್ದಂತೆ ಹೀರೋಗಳಾಗುತ್ತಿದ್ದಾರೆ. ಆದರೆ, ಪ್ಯಾರಾಲಿಂಪಿಕ್ಸ್ ಆಟಗಾರರು ನಿಜ ಜೀವನದ ಹೀರೋಗಳು. ಈ ಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆಂದರೆ ಅವನು ಅಥವಾ ಅವಳಿಗೆ ಇದೊಂದು ದೊಡ್ಡ ಸಾಧನೆ ಎಂದು ಅವನಿ ಲೇಖಾರಾ ತಂದೆ ಈಟಿವಿ ಭಾರತಕ್ಕೆ ನೀಡಿದ ಎಕ್ಕ್ಲ್ಯೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಸ್ಪರ್ಧೆಯಲ್ಲಿ 5ನೇ ಶ್ರೇಯಾಂಕಿತಳಾಗಿರುವ ಅವನಿ ಇನ್ನೂ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಮಿಕ್ಸಡ್ ಏರ್ ರೈಫಲ್ ಪ್ರೋನ್, ಮಹಿಳೆಯರ 50 ಮೀಟರ್ ರೈಫಲ್ ಮತ್ತು ಮಿಕ್ಸಡ್ 50 ಮೀಟರ್ ರೈಫಲ್ನ ಫ್ರೋನ್ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ.
ಇದನ್ನು ಓದಿ : ವಿಶ್ವದ ಅಗ್ರಸ್ಥಾನದಲ್ಲಿನ ಭಾವನೆ ವರ್ಣನಾತೀತ.. ಚಿನ್ನದ ಪದಕ ವಿಜೇತೆ ಅವನಿ ಲೇಖಾರಾ