ಟೋಕಿಯೋ: ತನ್ನ ಒಲಿಂಪಿಕ್ಸ್ ಪದಾರ್ಪಣೆಯಲ್ಲೇ ಪದಕ ಗೆದ್ದಿರುವ ಭಾರತದ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ದೇಶಕ್ಕೆ ಚಿನ್ನದ ಪದಕ ತಂದುಕೊಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಕಳೆದ 8 ವರ್ಷಗಳಿಂದ ತಾವೂ ಪಟ್ಟ ಪರಿಶ್ರಮ ಮತ್ತು ತ್ಯಾಗಕ್ಕೆ ಇದೀಗ ಪ್ರತಿಫಲ ದೊರೆತಿದೆ ಎಂದು ಹೇಳಿದ್ದಾರೆ.
23 ವರ್ಷದ ಬಾಕ್ಸರ್ 69 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸೆನಾಜ್ ಸುಮರ್ನೆಲಿ ವಿರುದ್ಧ 0-5 ಅಂತರದಿಂದ ಬುಧವಾರ ಸೋಲು ಕಂಡರು.
ಇದು ನನಗೆ ಉತ್ತಮ ಸಾಧನೆ ಎನಿಸುತ್ತಿಲ್ಲ. ನಾನು ಚಿನ್ನದ ಪದಕ ಗೆಲ್ಲಲು ಸಾಕಷ್ಟು ಕಠಿಣ ಪರಿಶ್ರಮವಹಿಸಿದ್ದೆ. ಆದರೆ, ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದು ಬೇಸರ ತಂದಿದೆ. ನಾನು ನನ್ನ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ವಿಫಲನಾದೆ. ಎದುರಾಳಿ ಕೂಡ ತುಂಬಾ ಬಲಿಷ್ಠರಾಗಿದ್ದರು. ಹಾಗಾಗಿ ನಾನು ಬ್ಯಾಕ್ಫೂಟ್ನಲ್ಲಿ ಆಡಿದರೆ ಪಂಚ್ ಬೀಳಬಹುದೆಂದು ಆಲೋಚಿಸಿ ಆಕ್ರಮಣಕಾರಿಯಾಗಿ ಹೋದೆ ಆದರೆ, ಅದು ನಾನಂದುಕೊಂಡ ಹಾಗೆ ಕೆಲಸ ಮಾಡಲಿಲ್ಲ ಎಂದು ಪಂದ್ಯದ ನಂತರ ಲವ್ಲಿನಾ ಸೋಲಿಗೆ ಕಾರಣ ತಿಳಿಸಿದರು.