ನವದೆಹಲಿ:2020ರಟೋಕಿಯೋ ಒಲಿಂಪಿಕ್ಸ್ಗೆ ನಿನ್ನೆ ಅದ್ದೂರಿ ತೆರೆ ಬಿದ್ದಿದೆ. ದೇಶಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆದ್ದುಕೊಡುವಲ್ಲಿ ಭಾರತದ ಅಥ್ಲೀಟ್ಸ್ಗಳು ಯಶಸ್ವಿಯಾಗಿದ್ದಾರೆ. ಇದರ ಮಧ್ಯೆ ಗಾಲ್ಫ್ ಆಟಗಾರ್ತಿ ಆದಿತಿ ಸೇರಿದಂತೆ ಕೆಲ ಅಥ್ಲೀಟ್ಸ್ಗಳು ಭಾರತೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರೆಲ್ಲರೂ ಇಂದು ತವರಿಗೆ ಮರಳಿದ್ದು, ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಗಿದೆ.
ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕ್ರೀಡಾಪಟುಗಳಿಗೆ ಅದ್ಧೂರಿ ಸ್ವಾಗತ ನೀಡಲಾಗಿದ್ದು, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೂಗುಚ್ಛ ನೀಡಿ ಬರಮಾಡಿಕೊಂಡಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾ, ಪುರುಷರ ಹಾಕಿ ತಂಡ ಸೇರಿದಂತೆ ಕುಸ್ತಿಪಟು ಬಜರಂಗ್ ಪೂನಿಯಾ ಹಾಗೂ ಬಾಕ್ಸರ್ ಲವ್ಲಿನಾ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅಲ್ಲಿ ಸೇರಿದ್ದ ಅಪಾರ ಪ್ರಮಾಣದ ಜನರು ಜಯಘೋಷ ಮೊಳಗಿಸಿದರು. ಭಾರತೀಯ ಜನಪಾ ಪಾರ್ಟಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಎಲ್ಲ ಅಥ್ಲೀಟ್ಸ್ಗಳಿಗೆ ಭರ್ಜರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.
ಮೊದಲು ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಹೂಗುಚ್ಛ ನೀಡಿ ಸ್ವಾಗತ ಕೋರಿರುವ ತೇಜಸ್ವಿ ಸೂರ್ಯ, ಅವರೊಂದಿಗೆ ಕೆಲ ನಿಮಿಷಗಳ ಕಾಲ ಮಾತನಾಡಿದರು. ಇದಾದ ಬಳಿಕ ಬಾಕ್ಸರ್ ಲವ್ಲಿನಾ, ಪುರುಷರು ಹಾಗೂ ಮಹಿಳಾ ಹಾಕಿ ತಂಡ, ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನ ಸ್ವಾಗತ ಮಾಡಿಕೊಂಡರು. ಇದರ ಫೋಟೋ ಹಾಗೂ ಕೆಲವೊಂದು ವಿಡಿಯೋ ತುಣುಕುಗಳನ್ನ ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ.
ಇದನ್ನೂ ಓದಿರಿ: ಐತಿಹಾಸಿಕ ಟೋಕಿಯೋ ಒಲಿಂಪಿಕ್ಸ್ ಮುಗಿಸಿ ತವರಿಗೆ ಮರಳಿದ ಭಾರತೀಯ ಅಥ್ಲೆಟಿಕ್ಸ್ ತಂಡ
ಇದರ ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ನೇತೃತ್ವದ ತಂಡ ಕೂಡ ಕ್ರೀಡಾಪಟುಗಳಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡಿದೆ. ನೀರಜ್ ಚೋಪ್ರಾ ಹಾಗೂ ಬಜರಂಗ್ ಪೂನಿಯಾ ಸೇರಿದಂತೆ ಅನೇಕ ಅಥ್ಲೀಟ್ಸ್ಗಳೊಂದಿಗೆ ಜನರು ಸೆಲ್ಫಿ ತೆಗೆದುಕೊಳ್ಳಲು ಸಹ ಮುಂದಾದ ಘಟನೆ ನಡೆಯಿತು.
ಜಪಾನ್ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಭಾರತ ಇತಿಹಾಸ ರಚನೆ ಮಾಡಿದ್ದು, ಈ ಹಿಂದಿಗಿಂತಲೂ ಅತಿ ಹೆಚ್ಚು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ 41 ವರ್ಷಗಳ ನಂತರ ಹಾಕಿಯಲ್ಲಿ ಹಾಗೂ 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದ ಅಥ್ಲೀಟ್ಸ್ನಲ್ಲಿ ನೀರಜ್ ಚೋಪ್ರಾ ಮೊದಲ ಪದಕ ಗೆದ್ದಿದ್ದಾರೆ.