ಹೈದರಾಬಾದ್:ವಿಶ್ವಮಹಿಳಾ ಟೆನಿಸ್ ದಂತಕಥೆ ಜರ್ಮನಿಯ ಸ್ಟೆಫಿ ಗ್ರಾಫ್ ಜೂನ್ 14 ರಂದು ತಮ್ಮ 52ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ವಿಶ್ವಾದ್ಯಂತ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿತ್ತು.
ಆದರೆ ವಿಂಬಲ್ಡನ್ ಟೆನಿಸ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಸ್ಟೆಫಿ ಗ್ರಾಫ್ ಅವರ ಅಪರೂಪದ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
1996ರಲ್ಲಿ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸ್ಟೆಫಿಗ್ರಾಫ್ ಮತ್ತು ಕಿಮಿಕೊ ಡೇಟ್ ನಡುವೆ ಕಾದಾಟ ನಡೆದಿತ್ತು. ಈ ಪಂದ್ಯದಲ್ಲಿ ಗ್ರಾಫ್ ಅವರು ಸರ್ವ್ ಮಾಡುವಾಗ ಅನಾಮಧೇಯ ಪ್ರೇಕ್ಷಕನೊಬ್ಬ "ಸ್ಟೆಫಿ, ನೀವು ನನ್ನನ್ನು ಮದುವೆಯಾಗುತ್ತೀರಾ?" ಎಂದು ಜೋರಾಗಿ ಕಿರುಚಿ ಕೇಳಿದ್ದಾನೆ. ಇದು ಇಡೀ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು.
ಇದು ಸ್ಟೆಫಿ ಗ್ರಾಫ್ ಮೊಗದಲ್ಲೂ ನಗು ತರಿಸಿತ್ತು. ಹಾಗಂತ ಅವರು ಸುಮ್ಮನಾಗಲಿಲ್ಲ. ಸ್ವಲ್ಪ ವಿರಾಮ ತೆಗೆದುಕೊಂಡು, "ನಿಮ್ಮ ಬಳಿ ಎಷ್ಟು ಹಣವಿದೆ?" ಎಂದು ಕೇಳುತ್ತಾರೆ. ಸ್ಟೆಫಿ ಗ್ರಾಫ್ ಹೀಗೆ ಹೇಳುತ್ತಿದ್ದಂತೆ ಇಡೀ ಸ್ಟೇಡಿಯಂ ಪುಳಕಗೊಂಡಿತ್ತು.ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಬಾಲಿವುಡ್ ನಟಿಯರು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.