ಲಂಡನ್:ಸರ್ಬಿಯನ್ ಟೆನ್ನಿಸ್ ತಾರೆ ನೊವಾಕ್ ಜೋಕೊವಿಕ್ ಎಟಿಪಿ ರ್ಯಾಂಕಿಂಗ್ನಲ್ಲಿ 311 ವಾರಗಳ ಕಾಲ ನಂ.1 ಸ್ಥಾನ ಪೂರೈಸುವ ಮೂಲಕ ರೋಜರ್ ಫೆಡರರ್ ಹಿಂದಿಕ್ಕಿ ವಿಶ್ವದಾಖಲೆ ಬರೆದಿದ್ದಾರೆ.
ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿರುವ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೋಕೊವಿಕ್ ಇಂದಿಗೆ ಒಟ್ಟು ವೃತ್ತಿ ಜೀವನದಲ್ಲಿ 311 ವಾರಗಳನ್ನು ಅಗ್ರ ಶ್ರೇಯಾಂಕದಲ್ಲಿ ಕಳೆದಿದ್ದಾರೆ. ಇದಕ್ಕೂ ಮುನ್ನ ಸ್ವಿಸ್ ಸ್ಟಾರ್ ರೋಜರ್ ಫೆಡರರ್ 310 ವಾರಗಳ ಕಾಲ ಅಗ್ರ ಸ್ಥಾನದಲ್ಲಿದ್ದರು.
"ದಾಖಲೆ ಮುರಿದುಬಿದ್ದಿದೆ, ನೊವಾಕ್ ಜೋಕೊವಿಕ್ ಎಟಿಪಿ ರ್ಯಾಂಕಿಂಗ್ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಮೊದಲ ಶ್ರೇಯಾಂಕದಲ್ಲಿದ್ದ ದಾಖಲೆಗೆ ಪಾತ್ರರಾಗಿದ್ದಾರೆ" ಎಂದು ಎಟಿಪಿ ಟೂರ್ ತನ್ನ ಅಧಿಕೃತ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.