ಮಾಂಟ್ರಿಯಲ್:ರೋಜರ್ ಕಪ್ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಗಾಯದಿಂದ ಆಟವನ್ನು ಮುಂದುವರಿಸಲಾಗದೆ ಕಣ್ಣೀರಿಟ್ಟು ಹೊರನಡೆದ ಘಟನೆ ನಡೆದಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಸೆರೆನಾ ಕೆನಡಾದ ಬಿಯಾಂಕ ಆಯಂಡ್ರೀಸ್ಕು ಅವರ ವಿರುದ್ಧ ಆಡುತ್ತಿದ್ದಾಗ ಬೆನ್ನು ನೋವಿಗೆ ತುತ್ತಾಗಿ ಫೈನಲ್ನಿಂದ ಹಿಂದೆ ಸರಿದರು.
ಆಟ ಶುರುವಾಗಿ 19 ನಿಮಿಷಗಳಾಗಿತ್ತು. 24 ಗ್ರ್ಯಾಂಡ್ಸ್ಲಾಮ್ ಗೆದ್ದಿರುವ ಸೆರೆನಾಗೆ ಬಿಯಾಂಕ ಆಯಂಡ್ರೀಸ್ಕು ಸುಲಭ ತುತ್ತಾಗಬಹುದೆಂದು ಭಾವಿಸಲಾಗಿತ್ತು. ಆದರೆ, ಸೆರೆನಾ 3-1ರಲ್ಲಿ ಹಿನ್ನಡೆ ಅನುಭವಿಸಿದ್ದರು. ಆ ವೇಳೆಗೆ ಬೆನ್ನು ನೋವು ತಾಳಲಾರದೆ ಪಂದ್ಯದಿಂದ ಹಿಂದೆ ಸರಿದರು.
ಈ ವೇಳೆ ಮಾತನಾಡಿದ ಅವರು, ಪಂದ್ಯವನ್ನು ನನ್ನಿಂದ ಪೂರ್ಣಗೊಳಿಸಲು ಆಗುತ್ತಿಲ್ಲ. ಎಷ್ಟೇ ಪ್ರಯತ್ನಿಸಿದರೂ ಆಟವಾಡುವುದಕ್ಕೆ ನನ್ನಿಂದಾಗುತ್ತಿಲ್ಲ ಎಂದು ಭಾವುಕರಾಗಿ ಕುಳಿತಲ್ಲೇ ಕಣ್ಣೀರಿಟ್ಟರು. ನನಗೆ ಈ ವರ್ಷ ತುಂಬಾ ಕಠಿಣವಾಗಿದೆ. ಆದರೂ ಮುಂದೆ ನಡೆಯಬೇಕಿದೆ ಎಂದು ಹೇಳಿದರು.