ನ್ಯೂಯಾರ್ಕ್:ಭಾರತದ ಟೆನ್ನಿಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಪುರುಷ ಆಟಗಾರರು ಗ್ರಾಂಡ್ಸ್ಲಾಮ್ನ ಸಿಂಗಲ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸುಮಿತ್ ಗೋಯಲ್ ಹಾಗೂ ಪ್ರಜ್ನೇಶ್ ಗುಣೇಶ್ವರನ್ ಈ ಬಾರಿಯ ಅಮೆರಿಕ ಓಪನ್ ಸಿಂಗಲ್ಸ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಸುಮಿತ್ ಇಂದು ಬ್ರೆಜಿಲ್ನ ಜಾವ್ ಮೆನೆಜೆಸ್ ಅವರನ್ನು 5-7, 6-4,6-3 ರಲ್ಲಿ ಮಣಿಸುವ ಮೂಲಕ ಯುಎಸ್ ಓಪನ್ಗೆ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಗುಣೇಶ್ವರನ್ ನೇರ ಅರ್ಹತೆ ಪಡೆದುಕೊಂಡಿದ್ದಾರೆ.
ಭಾರತದ ಪರ 1998ರಲ್ಲಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ವಿಂಬಲ್ಡನ್ನಲ್ಲಿ ಪ್ರತ್ಯೇಕವಾಗಿ ಸಿಂಗಲ್ಸ್ನಲ್ಲಿ ಪ್ರತಿನಿಧಿಸಿದ್ದರು. ಇದೀಗ ಮತ್ತೊಮ್ಮೆ ಭಾರತದ ಇಬ್ಬರು ಆಟಗಾರರು ಪ್ರತಿಷ್ಠಿತ ಗ್ರ್ಯಾಂಡ್ಸ್ಲಾಮ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಚೊಚ್ಚಲ ಬಾರಿಗೆ ಗ್ರ್ಯಾಂಡ್ಸ್ಲಾಮ್ಗೆ ಎಂಟ್ರಿಕೊಡುತ್ತಿರುವ ಈ ಇಬ್ಬರಿಗೂ ಮೊದಲ ಸುತ್ತಿನಲ್ಲೇ ಘಟಾನುಘಟಿಗಳು ಎದುರಾಗಲಿದ್ದಾರೆ. ಸುಮನ್ ತಮ್ಮ ಮೊದಲ ಸುತ್ತಿನಲ್ಲಿ ಸ್ವಿಟ್ಜರ್ಲ್ಯಾಂಡ್ನ ರೋಜರ್ ಫೆಡೆರರ್ ಸವಾಲು ಎದುರಿಸುತ್ತಿದ್ದರೆ, ಗುಣೇಶ್ವರನ್ 5 ನೇ ಶ್ರೇಯಾಂಕದ ರಷ್ಯಾದ ಡೇನಿಯಲ್ ಮೆಡ್ವಡೇವ್ರನ್ನು ಎದುರಿಸಲಿದ್ದಾರೆ.