ಲೆಕ್ಸಿಂಗ್ಟನ್:ಅಮೆರಿಕದ ಲೆಕ್ಸಿಂಗ್ಟನ್‌ನಲ್ಲಿ ನಡೆದ ಟಾಪ್ ಸೀಡ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಆಕೆಯ ಸಹೋದರಿ ವೀನಸ್ ವಿಲಿಯಮ್ಸ್ ವಿರುದ್ಧ ಜಯ ಕಂಡಿದ್ದಾರೆ
ಸೆರೆನಾ, ವೀನಸ್ ವಿಲಿಯಮ್ಸ್ ಅವರನ್ನು 3-6, 6-3, 6-4ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಸೆರೆನಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಸೆರೆನಾ ಅವರು ಶೆಲ್ಬಿ ರೋಜರ್ಸ್ ವಿರುದ್ಧ ಆಡಲಿದ್ದಾರೆ.
31ನೇ ಬಾರಿ ಮುಖಾಮುಖಿಯಾದ ಸಹೋದರಿಯರ ಕಾದಾಟ ರೋಮಾಂಚನಕಾರಿಯಾಗಿತ್ತು. ಕೊರೊನಾ ಸಾಂಕ್ರಾಮಿಕದ ನಡುವೆ ಪ್ರೇಕ್ಷಕರಿಲ್ಲದೇ ನಡೆದ ಪಂದ್ಯದಲ್ಲಿ ಇಬ್ಬರು ಆಟಗಾರ್ತಿಯರು ಮಾಸ್ಕ್ ಅನ್ನು ಧರಿಸಿ ಕಣಕ್ಕಿಳಿದಿದ್ದರು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಸೆರೆನಾ "ಇದು ಖಂಡಿತವಾಗಿಯೂ ವಿಂಬಲ್ಡನ್ ಅಥವಾ ಯುಎಸ್ ಓಪನ್‌ನಲ್ಲಿನ ಕ್ರೀಡಾಂಗಣಕ್ಕಿಂತ ಹೆಚ್ಚು ಆರಾಮವಾಗಿದೆ" ಎಂದು ಹೇಳಿದ್ದಾರೆ. ಸಾಮಾಜಿಕ ಅಂತರದ ಕಾರಣದಿಂದಾಗಿ ಪಂದ್ಯ ಕೊನೆಗೊಂಡಾಗ, ಸಹೋದರಿಯರು ಹಸ್ತಲಾಘವ ಮತ್ತು ತಬ್ಬಿಕೊಳ್ಳದೇ ಕೇವಲ ರಾಕೆಟ್‌ಗಳನ್ನು ಟ್ಯಾಪ್ ಮಾಡಿದರು.