ನ್ಯೂಯಾರ್ಕ್(ಅಮೆರಿಕ) :ಟೆನಿಸ್ ಲೋಕದ ದಿಗ್ಗಜ ಸರ್ಬಿಯನ್ ತಾರೆ ನೊವಾಕ್ ಜೊಕೊವಿಕ್ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್ ಸೆಮಿ ಫೈನಲ್ನಲ್ಲಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದ್ದಾರೆ. 5 ಸೆಟ್ಗಳ ನಿರಂತರ ಹೋರಾಟದಲ್ಲಿ ಟೋಕಿಯೊ ಒಲಿಂಪಿಕ್ನ ಚಿನ್ನದ ಪದಕ ವಿಜೇತ ಅಲೆಗ್ಸಾಂಡರ್ ಜ್ವೆರೆವ್ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ.
ಮೆಡೋಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4-6, 6-2, 6-4, 4-6, 6-2 ಸೆಟ್ಗಳ ಅಂತರದಿಂದ ಜಯ ದಾಖಲಿಸಿದರು. ಈ ಮೂಲಕ ವರ್ಷದ ಗ್ರ್ಯಾಂಡ್ ಸ್ಲಾಮ್ ಫೈನಲ್ ಏರಿದ ಮೊದಲ ಆಟಗಾರನಾಗಿದ್ದು, ಒಂದು ವೇಳೆ ಫೈನಲ್ನಲ್ಲೂ ಜಯದಾಖಲಿಸಿದರೆ ವರ್ಷದ ಗ್ರ್ಯಾಂಡ್ ಸ್ಲಾಮ್ ಪಟ್ಟಕ್ಕೇರಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಇದಕ್ಕೂ ಮೊದಲು 52 ವರ್ಷಗಳ ಹಿಂದೆ ರಾಡ್ ಲಿವರ್ ಎಲ್ಲಾ 4 ಗ್ರ್ಯಾಂಡ್ ಸ್ಲಾಮ್ ಗೆದ್ದು ದಾಖಲೆ ಬರೆದಿದ್ದರು. ಜೊತೆಗೆ 1988ರಲ್ಲಿ ಸ್ಟೆಫಿ ಗ್ರಾಫ್ ಈ ಸಾಧನೆ ಮಾಡಿರುವ ಏಕೈಕ ಮಹಿಳಾ ಟೆನಿಸ್ ಆಟಗಾರ್ತಿಯಾಗಿದ್ದಾರೆ.
4ನೇ ಸೆಟ್ನಲ್ಲಿ ದಾಖಲೆಯ ಶಾಟ್ಸ್ : ಮೊದಲ ಸೆಟ್ ಅನ್ನು ಅಲೆಗ್ಸಾಂಡರ್ ಜ್ವೆರೆವ್ 4-6 ಅಂಕಗಳಿಂದ ಗೆದ್ದುಕೊಂಡರೆ, ಬಳಿಕ 2ನೇ ಮತ್ತು 3ನೇ ಸೆಟ್ ಅನ್ನು ಕ್ರಮವಾಗಿ 6-2, 6-4 ಅಂತರಿಂದ ಜೊಕೊವಿಕ್ ಗೆದ್ದರು.
ಆದರೆ, 4ನೇ ಸೆಟ್ನಲ್ಲಿ ಇಬ್ಬರು ಆಟಗಾರರ ಸೆಣಸಾಟ ಕುತೂಹಲ ಮೂಡಿಸಿತ್ತು. ಜತೆಗೆ ಟೆನಿಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಸೆಟ್ನಲ್ಲಿ 53 ಶಾಟ್ಸ್ ದಾಖಲಾದವು. ಇದು ಈ ಟೂರ್ನಿಯ ಅತ್ಯಂತ ದೀರ್ಘಕಾಲದ ಸೆಟ್ ಎನಿಸಿತು.
ಸೋಮವಾರ ಫೈನಲ್ ಹಣಾಹಣಿ :ಸೆಮಿ ಫೈನಲ್ನಲ್ಲಿ 5 ಸೆಟ್ಗಳ ಸೆಣಸಾಟದ ಮೂಲಕ ಜಯದಾಖಲಿಸಿದ ಜೊಕೊವಿಕ್ ಸೋಮವಾರ ನಡೆಯಲಿರುವ ಫೈನಲ್ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ಅವರ ವಿರುದ್ಧ ಆಡಲಿದ್ದಾರೆ.
ಎಟಿಪಿ ರ್ಯಾಂಕಿಂಗ್ನಲ್ಲಿ ಮೆಡ್ವೆಡೆವ್ 2ನೇ ಸ್ಥಾನದಲ್ಲಿದ್ದಾರೆ. 25 ವರ್ಷದ ರಷ್ಯನ್ ಆಟಗಾರ ಸೆಮಿ ಫೈನಲ್ನಲ್ಲಿ ಕೆನಡಾದ ಫೆಲಿಕ್ಸ್ ಅಗರ್-ಅಲಿಯಾಸಿಮ್ ವಿರುದ್ಧ ನೇರ ಸೆಟ್ನಲ್ಲಿ ಜಯ ದಾಖಲಿಸಿ ಫೈನಲ್ಗೆ ದಾಪುಗಾಲಿರಿಸಿದ್ದಾರೆ.
ಜ್ವೆರೆನ್ ಸೋಲಿಸಿ ಜೊಕೊವಿಕ್ ವೃತ್ತಿ ಜೀವನದ 31ನೇ ಸ್ಲಾಮ್ ಫೈನಲ್ ತಲುಪಿದಂತಾಗಿದೆ. ಅಲ್ಲದೆ ನ್ಯೂಯಾರ್ಕ್ನಲ್ಲಿಯೇ 9 ಬಾರಿ ಫೈನಲ್ ತಲುಪಿ 3 ಬಾರಿ ಫೈನಲ್ ಗೆದ್ದ ಏಕೈಕ ಆಟಗಾರ ಎನಿಸಿದ್ದಾರೆ.
ಜೊಕೊವಿಕ್ ತನ್ನ ವೃತ್ತಿ ಜೀವನದ 4ನೇ ಯುಎಸ್ ಓಪನ್ ಪ್ರಶಸ್ತಿಯನ್ನು ಮತ್ತು ಅವರ 21ನೇ ಸ್ಲಾಮ್ ಕಿರೀಟ ಮುಡಿಗೇರಿಸಲು ಉತ್ಸುಕರಾಗಿದ್ದಾರೆ. ಫೈನಲ್ನಲ್ಲಿ ಜಯದಾಖಲಿಸಿದರೆ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ಗಿಂತಲೂ ಹೆಚ್ಚು ಫೈನಲ್ ಆಡಿದ ಕೀರ್ತಿಗೆ ಭಾಜನರಾಲಿದ್ದಾರೆ.