ಲಂಡನ್: ವಿಂಬಲ್ಡನ್ ಬಾಲಕರ ವಿಭಾಗದ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಟೂರ್ನಿ ಫೈನಲ್ನಲ್ಲಿ ಭಾರತ ಮೂಲದ ಅಮೆರಿಕದ ಟೆನಿಸ್ ಆಟಗಾರ ಸಮೀರ್ ಬ್ಯಾನರ್ಜಿ, ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ವಿಕ್ಟರ್ ಲಿಲೊವ್ ವಿರುದ್ಧ 7-5, 6-3ರ ಅಂತರದಲ್ಲಿ ಇವರು ಜಯ ಗಳಿಸಿದರು.
ಗ್ರ್ಯಾನ್‌ಸ್ಲಾಮ್ ಜೂನಿಯರ್ ವಿಭಾಗದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ಸಮೀರ್ ಬ್ಯಾನರ್ಜಿ, ಇತ್ತೀಚೆಗಷ್ಟೇ ನಡೆದ ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಸಮೀರ್ ಬ್ಯಾನರ್ಜಿ ಹೆತ್ತವರು ಭಾರತದ ಮೂಲದವರಾಗಿದ್ದು, 1980ರಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ.