ಹಸ್ಟನ್(ಯುಎಸ್ಎ): ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಸ್ಶಿಪ್ಸ್ನಲ್ಲಿ ಮಹಿಳಾ ಡಬಲ್ಸ್ ಮತ್ತು ಮಿಕ್ಸಡ್ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ 16ರ ಸುತ್ತಿನಲ್ಲಿ ಮನಿಕಾ ಮತ್ತು ಅರ್ಚನಾ ಕಾಮತ್ ಜೋಡಿ 11-4,11 - 9, 6-11,11-7 ಅಂಕಗಳ ಅಂತರದಿಂದ ಹಂಗೇರಿಯ ಡೋರಾ ಮದರಾಸ್ ಮತ್ತು ಜಾರ್ಜಿನಾ ಪೋಟ ವಿರುದ್ಧ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶಿಸಿದರು.
ಭಾರತೀಯ ಜೋಡಿ ಕ್ವಾರ್ಟರ್ಸ್ನಲ್ಲಿ ಲಕ್ಸೆಂಬರ್ಗ್ನ ಸಾರಾ ಡಿ ನ್ಯೂಟ್ ಮತ್ತು ಕ್ಷಿಯಾನ್ ಲಿಯಾನ್ ನೀ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯವನ್ನು ಗೆದ್ದ ತಂಡ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಳ್ಳಲಿದೆ.
ಮಿಶ್ರ ಡಬಲ್ಸ್ನಲ್ಲೂ ಗೆಲುವು:
ಜಿ. ಸತಿಯಾನ್ ಜೊತೆಗೂಡಿ ಮಿಶ್ರ ಡಬಲ್ಸ್ನಲ್ಲಿ ಸ್ಪರ್ಧಿಸಿದ್ದ ಮನಿಕಾ USA - China ಜೋಡಿ ಕನಕ್ ಝಾ ಮತ್ತು ವಾಂಗ್ ಮನ್ಯೂ ವಿರುದ್ಧ ಮೊದಲೆರಡು ಸೆಟ್ ಕಳೆದುಕೊಂಡರೂ ಅದ್ಭುತ ಕಮ್ಬ್ಯಾಕ್ ಮಾಡಿ ಗೆಲುವು ಸಾಧಿಸಿದರು. ಭಾರತೀಯ ಜೋಡಿ 15 -17, 10 -12, 12-10,11-6,11-7ರಲ್ಲಿ (3-2) ಗೆಲುವು ಸಾಧಿಸಿತು. ಈ ಜೋಡಿ ಮುಂದಿನ ಸುತ್ತಿನಲ್ಲಿ ಜಪಾನ್ನ ಹರಿಮೊಟೋ ತೊಮಕಜು ಮತ್ತು ಹಯಾಟ ಹಿನಾ ವಿರುದ್ಧ ಸ್ಪರ್ಧಿಸಲಿದೆ.
ಆದರೆ, ಮತ್ತೊಂದು ಮಿಶ್ರ ಡಬಲ್ಸ್ ಜೋಡಿ ಶರತ್ ಕಮಲ್ ಮತ್ತು ಅರ್ಚನಾ ತಮ್ಮ 16ರ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ನ ಜಿಯಾ ನಾನ್ ಯುವಾನ್ ಮತ್ತು ಇಮ್ಯಾನುಯೆಲ್ ಲೆಬೆಸನ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.
ಇದನ್ನೂ ಓದಿ:ಇಂಡೋನೇಷ್ಯಾ ಓಪನ್ : ಕೊರಿಯಾದ ಯುಜಿನ್ ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟ ಪಿ ವಿ ಸಿಂಧು