ಪ್ಯಾರಿಸ್ : ಟೆನ್ನಿಸ್ ಲೋಕದ ದಿಗ್ಗಜ 13 ಬಾರಿ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಯ ವಿಜೇತ, ರಫೆಲ್ ನಡಾಲ್‌ರ ಪತ್ರಿಮೆಯನ್ನು ಫ್ರೆಂಚ್ ಓಪನ್ ಟೂರ್ನಿ ನಡೆಯುವ ರೋಲ್ಯಾಂಡ್ ಗ್ಯಾರೋಸ್ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದೆ.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡಾಲ್‌ರ 9 ಅಡಿ ಎತ್ತರದ ಪ್ರತಿಮೆ ನಿರ್ಮಾಣ
ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯು ಇಂದಿನಿಂದ ಆರಂಭವಾಗಿದೆ. ಸದ್ಯ ರಫೆಲ್ ನಡಾಲ್ 20 ಗ್ರ್ಯಾನ್ ಸ್ಲಾಂಗಳ ಒಡೆಯರಾಗಿದ್ದು, ಸ್ವಿಸ್ ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದೀಗ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮತ್ತೊಂದು ಗ್ರ್ಯಾನ್‌ಸ್ಲಾಂ ಗೆಲ್ಲುವ ಮೂಲಕ ಫೆಡರರ್ ದಾಖಲೆ ಅಳಿಸಿಹಾಕುವ ಕಾತರದಲ್ಲಿದ್ದಾರೆ ಈ ಎಡಗೈ ಆಟಗಾರ.
ಈ ಪತ್ರಿಮೆಯನ್ನ ಸ್ವತಃ ನಡಾಲ್ ಅನಾವರಣ ಮಾಡಿದ್ದಾರೆ. ಇದನ್ನು ಸ್ಟೀಲ್‌ನಿಂದ ನಿರ್ಮಿಸಿದ್ದು, ಪ್ರತಿಮೆಯು 3 ಮೀಟರ್(9ಅಡಿ) ಎತ್ತರ, 5 ಮೀಟರ್ ಅಗಲವಿದೆ. ರೋಲ್ಯಾಂಡ್ ಗ್ಯಾರೋಸ್ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಮೊದಲ ಪ್ರತಿಮೆ ಇದಾಗಿದೆ. ಈ ಪ್ರತಿಮೆ ಮೂಲಕ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್‌ಗೆ ವಿನೂತನ ಗೌರವ ಸಲ್ಲಿಸಲಾಗಿದೆ.
ಈ ಪ್ರತಿಮೆ ತುಂಬಾ ಸಹಜವಾಗಿ ಮೂಡಿ ಬಂದಿದೆ. ತುಂಬಾ ಅಚ್ಚುಕಟ್ಟಾಗಿ, ಆಧುನಿಕತೆಯ ಮೆರಗಿನೊಂದಿಗೆ ಪ್ರತಿಮೆ ನಿರ್ಮಿಸಲಾಗಿದ್ದು, ಇದನ್ನು ನೋಡಿ ಖುಷಿಯಾಯಿತು. ಈ ರೀತಿಯ ಪ್ರತಿಮೆ ನಿರ್ಮಾಣವಾಗಿದ್ದು, ಅದರಲ್ಲೂ ಇಂತಹ ಪ್ರತಿಷ್ಠಿತತ ಸ್ಥಳದಲ್ಲಿ ಸ್ಥಾಪಿಸಲಾಗಿದೆ ಎಂದರೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು?. ಈ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ಫ್ರೆಂಚ್ ಟೆನ್ನಿಸ್ ಫೆಡರೇಷನ್‌ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಪ್ರತಿಮೆಯೂ ಮನೋಜ್ಞವಾಗಿದೆ ಎಂದು ನಡಾಲ್ ಸಂತಸ ಹಂಚಿಕೊಂಡಿದ್ದಾರೆ.