ಪ್ಯಾರಿಸ್: ಫ್ರೆಂಚ್ ಓಪನ್ ಕ್ಲೇಕೋರ್ಟ್ ಟೆನ್ನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಭರ್ಜರಿ ಜಯ ಗಳಿಸುವ ಮೂಲಕ ವಿಶ್ವ ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೋಕೊವಿಕ್ ಮತ್ತು ಸ್ವಿಸ್ ದಿಗ್ಗಜ ರೋಜರ್ ಫೆಡರರ್ 3ನೇ ಸುತ್ತಿಗೇರಿದ್ದಾರೆ.
ಇನ್ನು, ವಿಶ್ವ ನಂ. 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಗಾಯದ ಸಮಸ್ಯೆಯಿಂದಾಗಿ ಎರಡನೇ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಾಜಿ ವಿಶ್ವ ನಂ. 1 ಕ್ಯಾರೊಲಿನಾ ಪ್ಲಿಸ್ಕೋವಾ ಕೂಡ ಮಹಿಳಾ ಸಿಂಗಲ್ಸ್ನಲ್ಲಿ 2ನೇ ಸುತ್ತಿನಲ್ಲಿ ಆಘಾತ ಎದುರಿಸಿದರು. 5ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ, 4ನೇ ಶ್ರೇಯಾಂಕಿತೆ ಅಮೆರಿಕದ ಸೋಫಿಯಾ ಕೆನಿನ್ ಮೂರನೇ ಸುತ್ತಿಗೇರಿದ್ದಾರೆ. ಪುರುಷರ ವಿಭಾಗದಲ್ಲಿ ವಿಶ್ವ ನಂ. 2 ಆಟಗಾರ ಡೆನಿಲ್ ಮೆಡ್ವೆಡೇವ್ ಮುನ್ನಡೆ ಕಂಡಿದ್ದಾರೆ.
25 ವರ್ಷದ ಬಾರ್ಟಿ ಪೋಲೆಂಡ್ನ ಮಗ್ದ ಲಿನೆಟ್ ವಿರುದ್ಧ ಮೊದಲ ಸೆಟ್ನಲ್ಲಿ 1-6ರಿಂದ ಸೋತು, 2ನೇ ಸೆಟ್ನಲ್ಲಿ 2-2 ಸಮಬಲದಲ್ಲಿದ್ದಾಗ ಸೊಂಟ ನೋವಿನಿಂದ ಬಳಲಿ ಪಂದ್ಯದಿಂದ ನಿವೃತ್ತಿ ಹೊಂದಿದರು. 2019ರ ಚಾಂಪಿಯನ್ ಬಾರ್ಟಿ ಮೊದಲ ಸೆಟ್ನಲ್ಲೂ ಗಾಯದ ನಡುವೆ ಹೋರಾಡಿದ್ದರು. ಬಾರ್ಟಿ ನಿರ್ಗಮನದಿಂದ ಟೂರ್ನಿಯಲ್ಲಿ ಈಗ ವಿಶ್ವದ ಅಗ್ರ 3 ಆಟಗಾರ್ತಿಯರಿಲ್ಲದಂತಾಗಿದೆ. ನಂ. 2 ನವೊಮಿ ಒಸಾಕ ಸುದ್ದಿಗೋಷ್ಠಿ ವಿವಾದದಿಂದ ಹೊರನಡೆದಿದ್ದರೆ, ನಂ. 3 ಸಿಮೋನಾ ಹಲೆಪ್ ಗಾಯದಿಂದಾಗಿ ಟೂರ್ನಿ ಆರಂಭಕ್ಕೂ ಮೊದಲೇ ಹೊರಬಿದ್ದಿದ್ದರು. 9ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಪ್ಲಿಸ್ಕೋವಾ 5-7, 1-6ರಿಂದ ಅಮೆರಿಕದ ಸ್ಲೋವನ್ ಸ್ಟೀಫನ್ಸ್ ವಿರುದ್ಧ ಸೋಲುಂಡರು.