ಪ್ಯಾರೀಸ್:ವಿಶ್ವದ ನಂ.1 ಆಟಗಾರ ನೊವಾಕ್ ಜೋಕೊವಿಕ್ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ನಲ್ಲಿ ಹಾಲಿ ಹಾಗೂ 13 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಜೋಕೊವಿಕ್ 3-6, 6-3, 7-6, 6-2 ಸೆಟ್ಗಳಿಂದ ಮಣಿಸಿದರು.
ಮೊದಲ ಸೆಟ್ನಲ್ಲಿ ಸೋತರೂ ಕೂಡ ಬಳಿಕ ಮೂರೂ ಸೆಟ್ಗಳಲ್ಲಿ ಪ್ರಾಬಲ್ಯ ತೋರಿದ ಜೋಕೊವಿಕ್ ಮಣ್ಣಿನ ಅಂಕಣದ ದೊರೆ ನಡಾಲ್ಗೆ ಸೋಲುಣಿಸಿದರು. ಎರಡನೇ ಸೆಟ್ನಲ್ಲಿ 6-3ರಿಂದ ತಿರುಗೇಟು ನೀಡಿದ ಜೋಕೊವಿಕ್ 3ನೇ ಸೆಟ್ನಲ್ಲಿ ಭಾರೀ ಪೈಪೋಟಿ ನಡೆಸಿ ಗೆಲ್ಲುವಲ್ಲಿ ಯಶಸ್ವಿಯಾದರು. 6-6ರಿಂದ ಸಮಬಲವಾಗಿದ್ದ 3ನೇ ಸೆಟ್, ಕೊನೆಯಲ್ಲಿ 7-6ರಿಂದ ನೊವಾಕ್ ಪಾಲಾಯಿತು. ಬಳಿಕ 4ನೇ ಸೆಟ್ನಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಹಿನ್ನೆಲೆ ರಾಫಾ ಆರಂಭಿಕ ಅಂಕಗಳ ಮುನ್ನಡೆ ಪಡೆದರೂ ರೋಚಕ ಆಟ ಪ್ರದರ್ಶಿಸಿದ ಜೋಕೊವಿಕ್ 6-2ರಿಂದ ಗೆದ್ದು, ಸತತ ಮೂರು ಸೆಟ್ಗಳ ಜಯದೊಂದಿಗೆ ಫೈನಲ್ಗೆ ಲಗ್ಗೆ ಇಟ್ಟರು.