ಹೈದರಾಬಾದ್: ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ವಿಭಾಗದ ಆಟಗಾರ್ತಿ, ಭಾರತದ ನಂಬರ್ 2 ಶ್ರೇಯಾಂಕಿತ ಸುತೀರ್ಥ ಮುಖರ್ಜಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. 'ನನ್ನ ಬಹುದಿನಗಳ ಕನಸು ನನಸಾಗುತ್ತಿದೆ. ಅಗ್ರ ಆಟಗಾರ್ತಿಯನ್ನು ಮಣಿಸುವುದೇ ನನಗೆ ಪ್ರಮುಖ ಗುರಿ' ಎಂದು ಅವರು ಮನದಾಳ ಹಂಚಿಕೊಂಡರು.
ಈಟಿವಿ ಭಾರತ ಜೊತೆಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಟೋಕಿಯೋ ಒಲಿಂಪಿಕ್ಸ್ ಅನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ. ಇದು ನನ್ನ ಬಾಲ್ಯದ ಕನಸು. ಇತರರು ಒಲಿಂಪಿಕ್ಸ್‌ನಲ್ಲಿ ಆಡುವುದನ್ನು ನಾನು ನೋಡಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ನಾನು ಒಲಿಂಪಿಕ್ಸ್‌ನಲ್ಲಿ ಆಡುವ ಕನಸು ಕಂಡಿದ್ದೇನೆ, ಆ ಕನಸೀಗ ನನಸಾಗುತ್ತಿದೆ' ಎಂದರು.
ಟೋಕಿಯೋ ಒಲಿಂಪಿಕ್ಸ್‌ಗೆ ಸಕಲ ಸಿದ್ಧತೆ..
2020ರ ಮಾರ್ಚ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಟೇಬಲ್ ಟೆನಿಸ್ ಪಂದ್ಯದಲ್ಲಿ ಮನಿಕಾ ಬತ್ರಾ ಅವರನ್ನು ಮಣಿಸಿದ್ದ 25 ವರ್ಷದ ಸುತೀರ್ಥ ಮುಖರ್ಜಿ, ಏಷ್ಯನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಈ ಗೆಲುವು ಈಕೆಯನ್ನು ಟೋಕಿಯೋ ಒಲಿಂಪಿಕ್ಸ್ ಕನಸನ್ನು ಜೀವಂತವಾಗಿಸಿತ್ತು. ಒಲಿಂಪಿಕ್ಸ್‌ಗೆ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಕೋಚ್‌ಗಳು, ಶ್ರಮವಹಿಸಿರುವ ಮಾಜಿ ರಾಷ್ಟ್ರೀಯ ಚಾಂಪಿಯನ್ ಸೌಮ್ಯದೀಪ್ ರಾಯ್ ಮತ್ತು ಪೌಲೊಮಿ ಘಾಟಕ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಒಲಿಂಪಿಕ್ಸ್‌ಗೆ ನನ್ನ ಸಿದ್ಧತೆಗಳು ಚೆನ್ನಾಗಿಯೇ ನಡೆದಿವೆ. ಸೌಮ್ಯದೀಪ್ ರಾಯ್ ಮತ್ತು ಪೌಲೊಮಿ ಅವರ ಶ್ರಮ ಹಾಗೂ ಆತ್ಮಸ್ಥೈರ್ಯ ತುಂಬಿದ ಫಲವಾಗಿ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗಿದೆ. ಕೋವಿಡ್‌ನಿಂದಾಗಿ ಎದೆಗುಂದದೆ ಅಭ್ಯಾಸ ಮಾಡುವಂತೆ ಅವರು ನನಗೆ ತಿಳಿ ಹೇಳಿದ್ದರು. ಹೆಚ್ಚು ಕೊರೊನಾ ಇದ್ದ ಸಂದರ್ಭದಲ್ಲೂ ಅಭ್ಯಾಸ ನಡೆಸಿದ್ದರಿಂದ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಸಹಕಾರಿಯಾಗಿದೆ. ಸೋನಿಪತ್ ಕೇಂದ್ರದಲ್ಲಿ ಕಳೆದ ತಿಂಗಳು ತರಬೇತಿ ಪಡೆದಿದ್ದೇನೆ. ಇದಾದ ಬಳಿಕ ಕೋಲ್ಕತ್ತಾಗೆ ವಾಪಸ್ ಆಗಿ ಸೌಮ್ಯದೀಪ್ ಮತ್ತು ಪೌಲೊಮಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದೇನೆ. ಇದರ ಹೊರತಾಗಿಯೂ ನಾನು ಈ ಮಟ್ಟಕ್ಕೆ ಬರಲು ನಮ್ಮ ಪೋಷಕರ ತ್ಯಾಗ ಬಹಳಷ್ಟಿದೆ ಎಂಬುದನ್ನು ಹೇಳಲು ಸುತೀರ್ಥ ಮುಖರ್ಜಿ ಮರೆಯಲಿಲ್ಲ.
ಇದನ್ನೂ ಓದಿ: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿಯಲ್ಲಿದ್ದ ಷೋಡಶಿ ಮೇಲೆ ಅತ್ಯಾಚಾರ!?
ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ನೀಡಿದ್ದ ಆರೋಪದಲ್ಲಿ 2015ರಲ್ಲಿ ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ ಸುತೀರ್ಥ ಮುಖರ್ಜಿಗೆ 1 ವರ್ಷದ ಮಟ್ಟಿಗೆ ನಿಷೇಧ ಹೇರಿತ್ತು. ಕಳೆದ 5 ವರ್ಷಗಳ ಹಿಂದೆ ರಿಯೋ ಡಿ ಜನೈರೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಬೇಕೆಂಬ ಈಕೆಯ ಕನಸು ಕಮರಿ ಹೋಗಿತ್ತು. ಸದ್ಯ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತಿರುವ ಮುಖರ್ಜಿ, ಸಣ್ಣ ಪಟ್ಟಣದಿಂದ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.
'ನಿಷೇಧಕ್ಕೆ ಒಳಾಗಿದ್ದ 1 ವರ್ಷ ಅತ್ಯಂತ ಸವಾಲಿನದ್ದಾಗಿತ್ತು ಎಂದು ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಸುತೀರ್ಥ ಮುಖರ್ಜಿ ಹೇಳಿದ್ದಾರೆ. ಈ ವೇಳೆ ನಾನು ಮತ್ತೆ ಆಡುತ್ತೇನೆ ಎಂದುಕೊಂಡಿರಲಿಲ್ಲ. ಬ್ಯಾನ್ ಆದ ಕೆಟ್ಟ ಗಳಿಗೆಯಿಂದ ಹೊರಬರಲು ನನ್ನ ಪೋಷಕರು ಮತ್ತು ಕೋಚ್ ಸೌಮ್ಯದೀಪ್ ಸಾಕಷ್ಟು ನೆರವಾದರು' ಎಂದು ಮುಖರ್ಜಿ ಹೇಳುತ್ತಾರೆ.