ಅಥೆನ್ಸ್: ವ್ಯಾಕ್ಸಿನೇಷನ್ ಸ್ಟೇಟಸ್ ಅನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸಿರುವ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರ ನಿರ್ಧಾರವನ್ನು ಗೌರವಿಸುವುದಾಗಿ ವಿಶ್ವದ 4ನೇ ಶ್ರೇಯಾಂಕದ ಗ್ರೀಕ್ನ ಸ್ಟೆಫಾನೊಸ್ ಸಿಟ್ಸಿಪಾಸ್ ಹೇಳಿದ್ದಾರೆ. ಜೊತೆಗೆ ಅವರು ಆಸ್ಟ್ರೇಲಿಯನ್ ಓಪನ್ನಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದಾರೆ.
ವಿಶ್ವದ ನಂಬರ್ 1 ಟೆನಿಸ್ ಪ್ಲೇಯರ್ ನೊವಾಕ್ ಜೋಕೊವಿಕ್ ತಮ್ಮ ವ್ಯಾಕ್ಸಿನೇಷನ್ ಸ್ಟೇಟಸ್ ತಿಳಿಸಿದಿರುವುದು ಮತ್ತು ಸಿಡ್ನಿಯಲ್ಲಿ ಜನವರಿ 1ರಿಂದ ಆರಂಭವಾಗಲಿರುವ ಎಟಿಪಿ ಕಪ್ನಿಂದ ಹಿಂದೆ ಸರಿದಿರುವುದು ಆಸ್ಟ್ರೇಲಿಯನ್ ಓಪನ್ ಆಯೋಜಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಆಸ್ಟ್ರೇಲಿಯಾ ಓಪನ್ನಲ್ಲಿ ಭಾಗವಹಿಸಲು ಸಂಪೂರ್ಣ ಲಸಿಕೆ ಪಡೆದಂತಹ ಮತ್ತು ವೈದ್ಯಕೀಯ ಮಿತಿ ಪಡೆಯುವ ಕೆಲವೇ ಸೀಮಿತ ಆಟಗಾರರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆದರೆ, ಲಸಿಕೆ ಪಡೆಯುವುದು ವ್ಯಕ್ತಿಯ ವೈಯಕ್ತಿಕ ನಿರ್ಧಾರ, ಅದನ್ನು ಯಾರು ಪ್ರಶ್ನೆ ಮಾಡಬಾರದು ಎಂದು ವಾದಿಸಿಕೊಂಡು ಬಂದಿರುವ ನೊವಾಕ್ ಜೋಕೊವಿಕ್ ಇದುವರೆಗೂ ತಾವೂ ಲಸಿಕೆ ಸ್ಥಿತಿಯ ಬಗ್ಗೆ ಎಲ್ಲೂ ಬಹಿರಂಗಪಡಿಸಿಲ್ಲ.