ಮೆಲ್ಬೋರ್ನ್:ಆಸ್ಟ್ರೇಲಿಯಾ ಓಪನ್ ಪುರುಷರ ಮತ್ತು ಮಹಿಳಾ ಡಬಲ್ಸ್ ಪಂದ್ಯ ನಡೆಯುತ್ತಿದ್ದು, ಭಾರತದ ದಿವಿಜ್ ಶರಣ್ ಮತ್ತು ಅಂಕಿತಾ ರೈನಾ ಪರಾಭವಗೊಂಡಿದ್ದಾರೆ.
ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ನೇರ ಪ್ರವೇಶ ಪಡೆದ ಮೂರನೇ ಭಾರತೀಯ ಮಹಿಳಾ ಟೆನಿಸ್ ಆಟಗಾರ್ತಿ ಅಂಕಿತಾ ಮತ್ತು ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ರೊಮೇನಿಯಾದ ಮಿಹೇಲಾ ಬುಜಾರ್ನೆಕು ಜೋಡಿ ಒಲಿವಿಯಾ ಗಡೆಕ್ಕಿ ಮತ್ತು ಬೆಲಿಂಡಾ ವೂಲ್ಕಾಕ್ ಜೋಡಿ ವಿರುದ್ಧ 3-6, 0-6 ಸೆಟ್ಗಳಿಂದ ಸೋಲುಂಡಿದ್ದಾರೆ.
ಇನ್ನು ಒಂದು ಗಂಟೆ ನಾಲ್ಕು ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದಿವಿಜ್ ಮತ್ತು ಅವರ ಸ್ಲೋವಾಕಿಯಾದ ಜೊತೆಯಾಟಗಾರ ಇಗೊರ್ ಜೆಲೆನಾಯ್ ಅವರು ಜರ್ಮನ್ನ ಯಾನಿಕ್ ಹ್ಯಾನ್‌ಫ್ಮನ್ ಮತ್ತು ಕೆವಿನ್ ಕ್ರಾವಿಯೆಟ್ಜ್ ವಿರುದ್ಧ 1-6, 4-6 ಸೆಟ್ಗಳಿಂದ ಸೋಲು ಅನುಭವಿಸಿದ್ದಾರೆ.
ಈ ಮೂಲಕ ಮಹಿಳಾ ಮತ್ತು ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತ ಆಟಗಾರರು ಸೋಲುಂಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಇತರ ಭಾರತೀಯರಾದ ರೋಹನ್ ಬೋಪಣ್ಣ ಮತ್ತು ಜಪಾನ್‌ನ ಬೆನ್ ಮೆಕ್ಲಾಕ್ಲಾನ್ ಅವರು ಕೊರಿಯನ್ ವೈಲ್ಡ್ ಕಾರ್ಡ್ ಜೋಡಿ ಜಿ ಸುಂಗ್ ನಾಮ್ ಮತ್ತು ಮಿನ್-ಕ್ಯೂ ಸಾಂಗ್ ವಿರುದ್ಧ 4-6 6-7 ಸೆಟ್ ಅಂತರದ ಸೋಲಿನ ನಂತರ ಆರಂಭಿಕ ಸುತ್ತಿನಲ್ಲಿ ಹೊರಗುಳಿದಿದ್ದಾರೆ.
ಆದಾಗ್ಯೂ, ಅನುಭವಿ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಯಿಂಗಿಂಗ್ ಡುವಾನ್ ಜೊತೆ ಪಾಲುದಾರರಾಗಲಿದ್ದಾರೆ. ಮೊದಲ ಸುತ್ತಿನಲ್ಲಿ ಅಮೆರಿಕನ್ ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ಮತ್ತು ಯುನೈಟೆಡ್ ಕಿಂಗ್‌ಡಂನ ಜೇಮಿ ಮುರ್ರೆ ವಿರುದ್ಧ ಸೆಣಸಲಿದ್ದಾರೆ.