ಮೆಲ್ಬೋರ್ನ್ :ವಿಶ್ವದ ನಂಬರ್ ಒನ್ ಟೆನ್ನಿಸ್ ಪ್ಲೇಯರ್ ನೊವಾಕ್ ಜೋಕೊವಿಕ್ 2021ರ ಆಸ್ಟ್ರೇಲಿಯನ್ ಓಪನ್ನಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ಸೆರ್ಬಿಯನ್ ತಾರೆ ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ನ ಜೆರೆಮಿ ಚಾರ್ಡಿ ವಿರುದ್ಧ 6-3, 6-1, 6-2ರಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು.
ಇದಕ್ಕೂ ಮುನ್ನ ಈ ಇಬ್ಬರು ಆಟಗಾರರು 13 ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲೂ ಹಾಲಿ ಚಾಂಪಿಯನ್ನರು ಗೆಲುವು ಸಾಧಿಸಿದ್ದಾರೆ.
18ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಗರಿಷ್ಠ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಪಡೆದಿರುವ ನಡಾಲ್(20) ಮತ್ತು ಫೆಡರರ್(20) ದಾಖಲೆಗೆ ತುಂಬಾ ಹತ್ತಿರವಾಗಲಿದ್ದಾರೆ.
ಈಗಾಗಲೇ ಜೋಕೊವಿಕ್ 8 ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿರುವುದರಿಂದ ಈ ಬಾರಿಯೂ ಅವರೇ ನೆಚ್ಚಿನ ಆಟಗಾರರಾಗಿದ್ದಾರೆ. ಜೋಕೊವಿಕ್ ಮುಂದಿನ ಸುತ್ತಿನಲ್ಲಿ ಅಮೆರಿಕಾದ ಫ್ರಾನ್ಸಿಸ್ ಟಿಯಾಫೊ ಸವಾಲನ್ನು ಎದುರಿಸಲಿದ್ದಾರೆ.
ಇವರ ಜೊತೆಗೆ ಟೂರ್ನಿಯ ಆರಂಭದ ದಿನ 3ನೇ ಶ್ರೇಯಾಂಕದ ಯುಎಸ್ ಓಪನ್ ಚಾಂಪಿಯನ್ ಡೊಮೆನಿಕ್ ಥೀಮ್, ಕಜಕಿಸ್ತಾನದ ಮಿಖಾಯಿಲ್ ಕುಕುಷ್ಕಿನ್ ಅವರನ್ನು ಮೊದಲ ಸುತ್ತಿನ ಪಂದ್ಯದಲ್ಲಿ 7-6(2), 6-2, 6-3 ರಲ್ಲಿ ಮಣಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು. ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ 6-7(8) 7-6 (5), 6-3, 6-2 ರಲ್ಲಿ ಅಮೆರಿಕಾದ ಮಾರ್ಕೋಸ್ ಗಿರಾನ್ ಮಣಿಸಿದರು.
ಇದನ್ನು ಓದಿ:24 ನೇ ಗ್ರ್ಯಾಂಡ್ ಸ್ಲ್ಯಾಮ್ನತ್ತ ಚಿತ್ತ: ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಸೆರೆನಾ ವಿಲಿಯಮ್ಸ್