ನ್ಯೂಯಾರ್ಕ್:ಕೊರೊನಾದಿಂದ ಹೆಚ್ಚು ಹಾನಿಗೊಳಗಾಗಿರುವ ದೇಶವಾದ ಅಮೆರಿಕಾದಲ್ಲಿ ಪ್ರತಿಷ್ಠಿತ ಟೆನ್ನಿಸ್ ಟೂರ್ನಿಯಾದ ಯುಎಸ್ ಓಪನ್ ಸೋಮವಾರದಿಂದ ಜೈವಿಕ ಸುರಕ್ಷತಾ ವಲಯದಲ್ಲಿ ಆರಂಭವಾಗಲಿದೆ.
ಟೆನ್ನಿಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಟೂರ್ನಿ ಆರಂಭಗೊಳ್ಳುತ್ತಿದೆ. ಇನ್ನು ಟೂರ್ನಿಗೆ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ವಿಜೇತರಾಗಿರುವ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಸಹಿತ ಟಾಪ್ ರ್ಯಾಂಕ್ ಆಟಗಾರರು ಗೈರಾಗಲಿರುವುದು ಟೂರ್ನಿಗೆ ತೀವ್ರವಾದ ಹಿನ್ನಡೆಯಾಗಲಿದೆ.
ನಿನ್ನೆಯಷ್ಟೇ ಕೊವಿಡ್ ಮಹಾಮಾರಿಯ ನಡುವೆಯೇ ವೆಸ್ಟರ್ನ್ ಅಂಡ್ ಸದರ್ನ್ಸ್ ಮಾಸ್ಟರ್ಸ್ 1000 ಟೂರ್ನಿಯನ್ನು ಯಶಸ್ವಿಯಾಗಿ ಅಮೆರಿಕಾದಲ್ಲಿ ನಡೆದಿರುವುದರಿಂದ ಯುಎಸ್ ಓಪನ್ ಆರಂಭಿಸಲು ಅಂಘಟಕರಿಗೆ ಹೆಚ್ಚು ಆತ್ಮ ವಿಶ್ವಾಸವನ್ನು ತಂದುಕೊಟ್ಟಿದೆ. ಈ ಗ್ರ್ಯಾಂಡ್ಸ್ಲಾಮ್ ಯಶಸ್ವಿಯಾಗಿ ಪೂರ್ಣಗೊಂಡರೆ ಕ್ರೀಡಾಲೋಕದಲ್ಲೆ ಕೊರೊನಾ ಹೊರತಾಗಿಯೂ ಯಶಸ್ವಿಯಾದ ಬೃಹತ್ ಟೂರ್ನಮೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಟೂರ್ನಿಯಲ್ಲಿ ಸ್ಪೇನಿನ ರಾಫೆಲ್ ನಡಾಲ್, ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್, ನಿಕ್ ಕಿರ್ಗಿಯೋಸ್, ಜಪಾನ್ನ ಕೀ ನಿಶಿಕೊರಿ ಗೈರಾಗುತ್ತಿರುವ ಪ್ರಮುಖ ಪುರುಷ ಟೆನ್ನಿಸ್ ಆಟಗಾರರಾದರೆ. ಮಹಿಳೆಯರ ವಿಭಾದದಲ್ಲಿ ಅಗ್ರ ರ್ಯಾಂಕಿಂಗ್ನ ಆ್ಯಶ್ಲೆ ಬಾರ್ಟಿ, 2ನೇ ಶ್ರೇಯಾಂಕದ ಆಟಗಾರ್ತಿ ಸಿಮೋನಾ ಹಾಲೆಪ್, ಎಲಿನಾ ಸ್ವಿಟೋಲಿನಾ, ಹಾಲಿ ಚಾಂಪಿಯನ್ ಬಿಯಾಂಕಾ ಆ್ಯಂಡ್ರಿಸ್ಕೂ, ಕಿಕಿ ಬರ್ಟೆನ್ಸ್ ಮುಂತಾದ ಸ್ಟಾರ್ ಆಟಗಾರರ ಕೋವಿಡ್ ಭೀತಿಯಿಂದ ಹೊರಗುಳಿದಿದ್ದಾರೆ.
23 ಗ್ರ್ಯಾಂಡ್ ಸ್ಲಾಮ್ ಗೆದ್ದು 2 ನೇ ಸ್ಥಾನದಲ್ಲಿರುವ ಸೆರೆನಾ ವಿಲಿಯಮ್ಸ್ ಇನ್ನೊಂದು ಗ್ರ್ಯಾಂಡ್ ಸ್ಲಾಮ್ ಗೆದ್ದರೆ ಸಾರ್ವಕಾಲಿಕ ದಾಖಲೆಯನ್ನು ಮಾರ್ಗರೇಟ್ ಕೋರ್ಟ್(24) ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಕಳೆದ 7 ಅಮೆರಿಕಾ ಓಪನ್ ಗ್ರಾನ್ಸ್ಲಾಮ್ನಲ್ಲಿ 5 ಬಾರಿ ಚಾಂಪಿಯನ್ ಆಗಿರುವ ಜೋಕೊವಿಕ್ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ. ಜೋಕೊವಿಕ್ ಯುಎಸ್ ಓಪನ್ ಗೆದ್ದರೆ ಅವರ ಗ್ರ್ಯಾಂಡ್ಸ್ಸ್ಲಾಮ್ ಪ್ರಶಸ್ತಿ 18ಕ್ಕೆ ಏರಲಿದೆ. ಪ್ರಸ್ತುತ ರೋಜರ್ ಫೆಡರರ್ (20) ಹಾಗೂ ರಾಫೆಲ್ ನಡಾಲ್ (19) ಅತಿ ಹೆಚ್ಚು ಗ್ರ್ಯಾಂಡ್ಸ್ಲಾಮ್ ಗೆದ್ದಿರುವ ಆಟಗಾರರಾಗಿದ್ದಾರೆ.