ದುಬೈ:ಐಸಿಸಿ ಟಿ-20 ವಿಶ್ವಕಪ್ ಸೂಪರ್-12 ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ ಬಳಿಕ, ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಕ್ಷಮೆಯಾಚಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬೌಲಿಂಗ್ ಕೋಚ್ ಯೂನಿಸ್, ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕೇವಲ ಒಂದು ತಿಂಗಳಿರುವಾಗ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಾಕ್ ಆರಂಭಿಕ ಬ್ಯಾಟರ್ ಮೊಹಮದ್ ರಿಜ್ವಾನ್ ಹಿಂದೂಗಳ ಮುಂದೆ ನಮಾಜ್ ಮಾಡಿದ್ದಾರೆ ಎಂದಿದ್ದ ಯುನಿಸ್ ಅವರ ವಿವಾದಾತ್ಮಕ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಕಾರರು ಹಾಗೂ ಕ್ರೀಡಾಭಿಮಾನಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಕಾರ್, 'ಎಲ್ಲದಕ್ಕಿಂತ ತಮಗೆ, ಮೈದಾನದಲ್ಲಿ ರಿಜ್ವಾನ್ ಹಿಂದೂಗಳ ಎದುರು ನಮಾಜ್ ಮಾಡಿದ್ದು ತುಂಬಾ ಇಷ್ಟವಾಯಿತು' ಎಂದು ಹೇಳಿದ್ದರು. ಈ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಆಕಾಶ್ ಚೋಪ್ರಾ ಮತ್ತು ಖ್ಯಾತ ವೀಕ್ಷಕ ವಿವರಣೆಕಾರ ಹರ್ಷಾ ಭೋಗ್ಲೆ ಸೇರಿದಂತೆ ಹಲವರು ಯೂನಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
'ಕ್ರಿಕೆಟಿಗರು ಆಟದ ರಾಯಭಾರಿಗಳಾಗಿರುತ್ತಾರೆ, ಅಂತವರು ಸ್ವಲ್ಪ ಹೆಚ್ಚು ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆಂದು ನಾನು ಭಾವಿಸುತ್ತೇನೆ. ವಕಾರ್ ಅವರ ಹೇಳಿಕೆಗೆ ಕ್ಷಮೆಯಾಚನೆ ಅಗತ್ಯವಾಗಿದ್ದು, ನಾವು ಕ್ರಿಕೆಟ್ ಜಗತ್ತನ್ನು ಒಂದುಗೂಡಿಸಬೇಕೆ ಹೊರತು ಧರ್ಮದ ಮೂಲಕ ಅದನ್ನು ವಿಭಜಿಸಬಾರದು' ಎಂದು ಹರ್ಷಾ ಭೋಗ್ಲೆ ಕಿಡಿಕಾರಿದ್ದರು.
ಇದೀಗ ವಕಾರ್ ಕ್ಷಮೆ ಕೋರಿದ್ದು, ಪಂದ್ಯದ ಆ ಕ್ಷಣದ ಉದ್ವೇಗದಲ್ಲಿ ಹೀಗೆ ಹೇಳಿದ್ದೇನೆ. ಇತರರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ, ಇದು ಉದ್ದೇಶಪೂರ್ವಕವಲ್ಲ. ಕ್ರೀಡೆಯು ಜನಾಂಗ, ಬಣ್ಣ ಅಥವಾ ಧರ್ಮವನ್ನು ಮೀರಿ ಜನತೆಯನ್ನು ಒಗ್ಗೂಡಿಸುತ್ತದೆ ಎಂದು ಟ್ವೀಟ್ ಮಾಡಿದ್ದು, ಕೈ ಮುಗಿದಿರುವ ಎಮೊಜಿ ಜೊತೆಗೆ #apologies ಎಂದು ಬರೆದುಕೊಂಡಿದ್ದಾರೆ.
ಐಸಿಸಿ ವಿಶ್ವ ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ಆಟಗಾರ ಮೊಹಮದ್ ರಿಜ್ವಾನ್, ಪಂದ್ಯದ ಪಾನೀಯ ವಿರಾಮದ ವೇಳೆ ನಮಾಜ್ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಇದನ್ನೂ ಓದಿ:Watch: ಡೆವೊನ್ ಕಾನ್ವೆ 'ಕ್ಯಾಚ್ ಆಫ್ ದಿ ಟೂರ್ನಮೆಂಟ್'