ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಟಿ20 ವಿಶ್ವಕಪ್ ಪಯಣ ಮುಗಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಲಿದ್ದಾರೆ. 38 ವರ್ಷದ ಬ್ರಾವೋ 2019ರಲ್ಲಿ ನಿವೃತ್ತಿ ಘೋಷಿಸಿ ಮತ್ತೆ ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡದೆ ಹೊರಹೋಗಿದೆ. ಹೀಗಾಗಿ ವಿದಾಯ ಹೇಳಲು ಮುಂದಾಗಿದ್ದಾರೆ.
2012 ಮತ್ತು 2016ರಲ್ಲಿ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವಲ್ಲಿ ಬ್ರಾವೋ ಪ್ರಮುಖ ಆಟಗಾರ ಎನಿಸಿದ್ದರು. ಅವರು ಈವರೆಗೆ 90 ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ್ದಾರೆ.
ಈ ವಿದಾಯ ಕುರಿತಂತೆ ಮಾತನಾಡಿರುವ ಅವರು, ಇದೀಗ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ಉತ್ತಮ ವೃತ್ತಿ ಜೀವನ ಗಳಿಸಿದ್ದೆ. 18 ವರ್ಷಗಳ ಕಾಲ ವೆಸ್ಟ್ ಇಂಡೀಸ್ ತಂಡ ಪ್ರತಿನಿಧಿಸಿದ್ದೆ. ಈ ನಡುವೆ ಕೆಲ ಏರಿಳಿತ, ಸವಾಲು ಎದುರಿಸಿದ್ದೇನೆ. ಹಿಂದಿರುಗಿ ನೋಡಿದಾಗ ನನ್ನ ದೇಶ ಮತ್ತು ಕೆರಿಬಿಯನ್ ಜನರನ್ನು ಪ್ರತಿನಿಧಿಸಿದ್ದಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.