ಶಾರ್ಜಾ: ಟಿ20 ವಿಶ್ವಕಪ್ನ ಸೂಪರ್ 12 ಹಂತದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ನ್ಯೂಜಿಲ್ಯಾಂಡ್ 52 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ.
ಗ್ಲೇನ್ ಫಿಲಿಪ್ಸ್ (39), ಜೇಮ್ಸ್ ನೀಶಾಮ್ (35) ಮತ್ತು ಕೇನ್ ವಿಲಿಯಮ್ಸನ್ (28) ಅವರ ಬ್ಯಾಟಿಂಗ್ ಹಾಗೂ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಅವರ ಬೌಲಿಂಗ್ ಸಂಘಟಿತ ಹೋರಾಟದಿಂದ ನ್ಯೂಜಿಲ್ಯಾಂಡ್ ಗೆಲುವು ಪಡೆಯಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. ಇದರಲ್ಲಿ ಮಾರ್ಟಿನ್ ಗಪ್ಟಿಲ್ 18, ಡೇರಿಯಲ್ ಮಿಚೆಲ್ 19 ಹಾಗೂ ಡೆವೋನ್ ಕಾನ್ವೆ 17 ರನ್ಗಳ ಕೊಡುಗೆ ನೀಡಿದ್ದರು.
ನಮೀಬಿಯಾ ಪರ ಬೆರ್ನಾರ್ಡ್ ಶೋಲ್ಜ್, ಡೇವಿಡ್ ವೀಸ್, ಗೆರ್ಹಾರ್ಡ್ ಎರಾಸ್ಮಸ್ ತಲಾ ಒಂದು ವಿಕೆಟ್ ಪಡೆದರು. ಡೆವೋನ್ ಕಾನ್ವೆ ಅವರು ಗೆರ್ಹಾರ್ಡ್ ಎರಾಸ್ಮಸ್ ಬೌಲಿಂಗ್ ವೇಳೆ ರನ್ ಔಟ್ ಆಗಿದ್ದರು. ಆದರೂ ನ್ಯೂಜಿಲ್ಯಾಂಡ್ ಉತ್ತಮ ಮೊತ್ತ ದಾಖಲಿಸುವಲ್ಲಿ ಸಫಲವಾಗಿತ್ತು.
ನ್ಯೂಜಿಲ್ಯಾಂಡ್ ನೀಡಿದ 163 ರನ್ಗಳ ಗುರಿ ಬೆನ್ನತ್ತಿದ ನಮೀಬಿಯಾ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಬೌಲಿಂಗ್ ದಾಳಿಗೆ ತತ್ತರಿಸಿತು. ಈ ಇಬ್ಬರೂ ಬೌಲರ್ಗಳು ಕಡಿಮೆ ರನ್ಗಳನ್ನು ನೀಡುವುದರ ಜೊತೆಗೆ ತಲಾ ಎರಡು ವಿಕೆಟ್ ಪಡೆದರು. ಇದರ ಜೊತೆಗೆ ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಾಮ್, ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ನಮೀಬಿಯಾ ಪರ ಸ್ಟಿಫನ್ ಬಾರ್ಡ್ 21, ಮೈಕಲ್ ವಾನ್ ಲಿನ್ಜೆನ್ 25, ಝೇನ್ ಗ್ರೀನ್ 23, ಡೇವಿಡ್ ವೀಸ್ 16 ರನ್ ಗಳಿಸಿದರೂ ಏಳು ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ ಕೇವಲ 111 ರನ್ ಗಳಿಸಲ ನಮೀಬಿಯಾ ಶಕ್ತವಾಗಿ ಪರಾಭವಗೊಂಡಿತು.
ಇದನ್ನೂ ಓದಿ:ಟಿ20 ವಿಶ್ವಕಪ್‌ನಲ್ಲಿಂದು ಭಾರತ vs ಸ್ಕಾಟ್ಲೆಂಡ್: ಟೀಂ ಇಂಡಿಯಾ ಸೆಮಿಫೈನಲ್ ಲೆಕ್ಕಾಚಾರ ಹೀಗಿದೆ..