ದುಬೈ: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್12 ಹಂತದಲ್ಲಿ ಭಾರತ ಇಂದು ಸಂಜೆ 4ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೆಣಸಾಡಲಿದೆ.
ಮೊದಲೆರೆಡು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಟೀಂ ಇಂಡಿಯಾ, ಮೂರನೇ ಪಂದ್ಯದಲ್ಲಿ ಅಫ್ಘನ್ ವಿರುದ್ಧ 66 ರನ್ಗಳ ಭರ್ಜರಿ ಗೆಲುವು ಪಡೆದಿತ್ತು. ಈ ಮೂಲಕ ಸೆಮಿಫೈನಲ್ ಆಸೆಯನ್ನು ಕೊಂಚಮಟ್ಟಿಗೆ ಜೀವಂತವಾಗಿರಿಸಿದೆ.
ಟೀಂ ಕೊಹ್ಲಿ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತೋರಿದ ಕಳಪೆ ಪ್ರದರ್ಶನವೇ ತಂಡದ ಸೋಲಿಗೆ ಪ್ರಮುಖ ಕಾರಣ. ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಬೌಲಿಂಗ್ ವಿಭಾಗದಲ್ಲೂ ಕೂಡಾ ಯಾವೊಬ್ಬ ಬೌಲರ್ ವಿಕೆಟ್ ಪಡೆಯಲಿಲ್ಲ.
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ತಂಡದಲ್ಲಿ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ, ಈ ಪಂದ್ಯದಲ್ಲೂ ರನ್ ಗಳಿಸಲು ಪರದಾಡಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬದಲಿಗೆ ಸ್ಥಾನ ಪಡೆದಿದ್ದ ಶಾರ್ದೂಲ್ ಠಾಕೂರ್ ಕೂಡ ಪ್ಲಾಪ್ ಆದರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 23, ಜಡೇಜಾ 26 ರನ್ ಬಿಟ್ಟರೆ ಉಳಿದ ಬ್ಯಾಟರ್ಗಳು ರನ್ ಗಳಿಸಲು ಪೇಚಾಟ ಮಾಡಿದರು.
ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ ಕೊಹ್ಲಿ ಬಾಯ್ಸ್, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 66 ರನ್ಗಳ ಅಮೋಘ ಗೆಲುವು ಪಡೆದರು. ಈ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ರಾಹುಲ್ ಮತ್ತು ಹಿಟ್ಮ್ಯಾನ್ ರೋಹಿತ್ ತಮ್ಮ ಹಳೆಯ ಲಯಕ್ಕೆ ಮರಳಿ 140 ರನ್ಗಳ ಜೊತೆಯಾಟ ನೀಡಿದರು. ಇವರು ಔಟಾದ ಬಳಿಕ ಕ್ರೀಸ್ಗಿಳಿದಿದ್ದ ಪಂತ್ ಮತ್ತು ಪಾಂಡ್ಯ ಕೂಡಾ ಅಬ್ಬರಿಸಿ ತಂಡದ ಮೊತ್ತವನ್ನು 200ರ ಗಟಿ ದಾಟಿಸಿದ್ದರು. ಇಂದಿನ ಪಂದ್ಯದಲ್ಲೂ ಕೂಡಾ ಈ ಬ್ಯಾಟರ್ಗಳಿಂದ ಈ ತರಹದ ಆಟ ಬರಬೇಕಿದೆ.
ಟೀಂ ಇಂಡಿಯಾ ಸೆಮಿಫೈನಲ್ ಲೆಕ್ಕಾಚಾರ ಹೀಗಿದೆ..
ಸೆಮಿಫೈನಲ್ ಹಾದಿ ಸುಗಮವಾಗಬೇಕಿದ್ದರೆ, ಮುಂದಿನ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಟೀಂ ಇಂಡಿಯಾ ಇದೆ. ಇಂದು ಭಾರತ ತಂಡ ಸ್ಕಾಟ್ಲೆಂಡ್ ವಿರುದ್ಧ ಸೆಣಸಾಡಲಿದ್ದು, ಮುಂದಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ.
1. ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಳ್ಳಬೇಕೆಂದರೆ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವುದರ ಮೂಲಕ ಉತ್ತಮ ನೆಟ್ ರನ್‌ರೇಟ್ ಗಳಿಸಲೇಬೇಕಾದ ಅನಿವಾರ್ಯತೆ ಇದೆ.