ದುಬೈ:ಟಿ-20 ವಿಶ್ವಕಪ್ ಪಂದ್ಯವೊಂದರಲ್ಲಿ ಟಿಕೆಟ್ ರಹಿತ ಪ್ರೇಕ್ಷಕರು ಕ್ರೀಡಾಂಗಣಕ್ಕೆ ನುಸುಳಲು ಯತ್ನಿಸಿದ ಘಟನೆಯನ್ನು ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಸೂಚನೆ ನೀಡಿದೆ.
ಶುಕ್ರವಾರ ರಾತ್ರಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೆ ಸುಮಾರು 16 ಸಾವಿರ ಟಿಕೆಟ್ಗಳ ಮಾರಾಟ ಮಾಡಲಾಗಿತ್ತು. ಆದರೆ, ಅದಕ್ಕೂ ಮೀರಿ ಸಾವಿರಾರು ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣಕ್ಕೆ ಬಲವಂತವಾಗಿ ನುಗ್ಗಲು ಯತ್ನಿಸಿದರು ಎಂದು ಐಸಿಸಿ ಹೇಳಿಕೆ ನೀಡಿದೆ.
ಈ ಘಟನೆಯ ನಂತರ ದುಬೈ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕ್ರೀಡಾಂಗಣದ ಒಳಗಿರುವ ಪ್ರತಿಯೊಬ್ಬರ ಸುರಕ್ಷತೆ ಬಗ್ಗೆ ಅಗತ್ಯ ಕ್ರಮ ಕೈಗೊಂಡರು. ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದ ಪ್ರೇಕ್ಷಕರನ್ನು ಚದುರಿಸಲು, ಪರಿಸ್ಥಿತಿಯನ್ನು ತಿಳಿಗೊಳಿಸಲು ಬಿಗಿ ಭದ್ರತೆಯನ್ನು ಕೈಗೊಂಡಿದ್ದರು.
ರಾತ್ರಿ 7 ಗಂಟೆಗೆ ಕ್ರೀಡಾಂಗಣದ ಎಲ್ಲಾ ಗೇಟ್ಗಳನ್ನು ಮುಚ್ಚಬೇಕು. ಸುರಕ್ಷಿತ ಮತ್ತು ನಿಯಂತ್ರಿತ ವಾತಾವರಣವನ್ನು ಸೃಷ್ಟಿ ಮಾಡಲು 7 ಗಂಟೆಯ ನಂತರ ಕ್ರೀಡಾಂಗಣದೊಳಗೆ ಯಾವುದೇ ವ್ಯಕ್ತಿಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಶುಕ್ರವಾರ ರಾತ್ರಿ ನಡೆದ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಐಸಿಸಿ ಈಗಾಗಲೇ ಇಸಿಬಿಗೆ ಸೂಚನೆ ನೀಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.
ಇದಷ್ಟೇ ಅಲ್ಲದೇ ಟಿಕೆಟ್ ಇದ್ದರೂ ಕೂಡಾ ಪಂದ್ಯ ನೋಡಲು ಸಾಧ್ಯವಾಗದ ಹಾಗೂ ಕ್ರೀಡಾಂಗಣದೊಳಗೆ ಪ್ರವೇಶಿಸಲು ಸಾಧ್ಯವಾಗದ ಕ್ರಿಕೆಟ್ ಪ್ರೇಮಿಗಳಲ್ಲಿ ಐಸಿಸಿ, ಬಿಸಿಸಿಐ ಮತ್ತು ಇಸಿಬಿ ಕ್ಷಮೆ ಕೇಳಿದ್ದು, ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ತಿಳಿದುಕೊಳ್ಳಲು ಟಿಕೆಟ್ ವಿತರಕರನ್ನು ಭೇಟಿಯಾಗಲು ಮನವಿ ಮಾಡಿವೆ.
ಇದನ್ನೂ ಓದಿ:ಯೋಗಿ ಸರ್ಕಾರ ವಿದ್ಯುತ್ ಬಿಲ್ನಿಂದ ಲೂಟಿ ಹೊಡೆಯುತ್ತಿದೆ: ಪ್ರಿಯಾಂಕಾ ಗಾಂಧಿ ವಾದ್ರಾ