ಕರ್ನಾಟಕ

karnataka

ETV Bharat / sports

T20 World Cup 2021: ವಾರ್ನರ್ ಫಿಫ್ಟಿ, ಕಾಂಗರೂಗಳಿಗೆ ಲಂಕಾ ವಿರುದ್ಧ 7 ವಿಕೆಟ್​ ಗೆಲುವು - ಶ್ರೀಲಂಕಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ

ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಆರ್ಭಟಿಸಿ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿದ್ದು, ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

david warner
david warner

By

Published : Oct 28, 2021, 11:21 PM IST

ದುಬೈ: ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​-12 ಹಂತದ ಗ್ರೂಪ್​​ 1ರಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್​​ಗಳ ಜಯ ದಾಖಲು ಮಾಡಿರುವ ಆಸ್ಟ್ರೇಲಿಯಾ ಸತತ ಎರಡನೇ ಜಯ ದಾಖಲು ಮಾಡಿದೆ.

ಆಸ್ಟ್ರೇಲಿಯಾ ಆರಂಭಿಕರ ಜೊತೆಯಾಟ

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಜಂಪಾ, ಸ್ಟಾರ್ಕ್​​​​​ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್​​ಗಳಲ್ಲಿ 6ವಿಕೆಟ್​ನಷ್ಟಕ್ಕೆ 154ರನ್​ಗಳಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಿಶಾಕ್​ ಕೇವಲ 7ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ಒಂದಾದ ಪೆರೆರಾ ಹಾಗೂ ಅಸಲಂಕ ಎದುರಾಳಿ ತಂಡದ ಬೌಲರ್​ಗಳನ್ನ ಸ್ವಲ್ಪ ಹೊತ್ತು ಕಾಡಿದರು. ಈ ಜೋಡಿ ತಂಡಕ್ಕೆ 63ರನ್​ಗಳ ಜೊತೆಯಾಟ ನೀಡಿತು. ವಿಕೆಟ್ ಕೀಪರ್​​ ಪೆರೆರಾ 35ರನ್​ಗಳಿಕೆ ಮಾಡಿದ್ದ ವೇಳೆ ಸ್ಟಾರ್ಕ್​ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದ್ರೆ, ಇದರ ಬೆನ್ನಲ್ಲೇ ಅಸಲಂಕಾ(35) ಕೂಡ ಜಂಪಾ ಓವರ್​​ನಲ್ಲಿ ಔಟಾದರು. ನಂತರ ಬಂದ ಫರ್ನಾಡೋ 4ರನ್​ಗಳಿಕೆ ಮಾಡಿ ಜಂಪಾ ಓವರ್​ನಲ್ಲೇ ಬಲಿಯಾದರು.

ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ರಾಜಪಕ್ಸೆ ಅಜೇಯ 33ರನ್​​ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್​ ನೀಡಿದ ಹಸರಂಗ 4ರನ್​, ಶನಕ 12 ಹಾಗೂ ಕರುಣರತ್ನೆ ಅಜೇಯ 9ರನ್​ಗಳಿಸಿದರು. ಈ ಮೂಲಕ ತಂಡ ಕೊನೆಯದಾಗಿ 20 ಓವರ್​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 154ರನ್​ಗಳಿಕೆ ಮಾಡಿತು. ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಟಾರ್ಕ್​, ಕಮಿನ್ಸ್​ ಹಾಗೂ ಜಂಪಾ ತಲಾ 2 ವಿಕೆಟ್ ಪಡೆದುಕೊಂಡರು.

155ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿತು. ಕಳಪೆ ಬ್ಯಾಟಿಂಗ್​ ಪ್ರದರ್ಶನಕ್ಕೊಳಗಾಗಿದ್ದ ವಾರ್ನರ್​​ ಹಾಗೂ ಫಿಂಚ್ ಜೋಡಿ ಇಂದಿನ ಪಂದ್ಯದಲ್ಲಿ ಉತ್ತಮ ಜೊತೆಯಾಟವಾಡಿತು. ಮೊದಲ ವಿಕೆಟ್​ನಷ್ಟಕ್ಕೆ 70ರನ್​ಗಳ ಆಟವಾಡಿದ ಈ ಜೋಡಿ ಎದುರಾಳಿ ಬೌಲರ್​ಗಳ ವಿರುದ್ಧ ಜವಾಬ್ದಾರಿಯುತ ಆಟವಾಡಿದರು. ಕೇವಲ 23 ಎಸೆತಗಳಲ್ಲಿ 2 ಸಿಕ್ಸರ್​, 5ಬೌಂಡರಿ ಸೇರಿ 37ರನ್​ಗಳಿಕೆ ಮಾಡಿದ್ದ ಫಿಂಚ್​​ ಹಸರಂಗ್​ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಮ್ಯಾಕ್ಸ್​ವೆಲ್​​ 5ರನ್​ಗಳಿಸಿ ಔಟಾದರು.

ಆರ್ಭಟಿಸಿದ ವಾರ್ನರ್​

ಸತತ ಬ್ಯಾಟಿಂಗ್ ವೈಫಲ್ಯದಿಂದ ನಿರಾಸೆಗೊಳಗಾಗಿದ್ದ ಡೇವಿಡ್ ವಾರ್ನರ್ ಇಂದು ಅಬ್ಬರಿಸಿದರು. ತಾವು ಎದುರಿಸಿದ 42 ಎಸೆತಗಳಲ್ಲಿ 10 ಬೌಂಡರಿ ಸೇರಿದಂತೆ 65ರನ್​ಗಳಿಸಿ, ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ಒಂದಾದ ಸ್ಮಿತ್ ಅಜೇಯ 28 ಹಾಗೂ ಸ್ಟೋನಿಸ್ ಅಜೇಯ 16ರನ್​ಗಳಿಸಿ ತಂಡಕ್ಕೆ ಗೆಲುವು ತಂದಿಟ್ಟರು. ಕೊನೆಯದಾಗಿ ತಂಡ 17 ಓವರ್​ಗಳಲ್ಲಿ 3 ವಿಕೆಟ್​ನಷ್ಟಕ್ಕೆ 155ರನ್​ಗಳಿಸಿ, ಗೆಲುವು ದಾಖಲು ಮಾಡಿತು. ಈಗಾಗಲೇ ವೆಸ್ಟ್​ ಇಂಡೀಸ್ ವಿರುದ್ಧ ಜಯ ಸಾಧಿಸಿರುವ ಕಾಂಗರೂ ಪಡೆ, ಇಂದಿನ ಪಂದ್ಯದಲ್ಲಿ ಜಯ ಸಾಧಿಸಿ,ಗ್ರೂಪ್ 1ರಲ್ಲಿ 2ನೇ ಸ್ಥಾನದಲ್ಲಿದೆ.

ಬೌಲಿಂಗ್​ನಲ್ಲಿ ಮಿಂಚಿದ ಜಂಪಾ

ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ(4 ಓವರ್​​, 12ರನ್ ನೀಡಿ 2 ವಿಕೆಟ್​) ನೀಡಿದ ಆ್ಯಂಡಂ ಜಂಪಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ABOUT THE AUTHOR

...view details