ಅಬುಧಾಬಿ (ದುಬೈ): ನಿನ್ನೆ ನಡೆದ ಐಸಿಸಿ ಟಿ20 ವಿಶ್ವಕಪ್ನ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಜಯ ದಾಖಲಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ ಮಾತನಾಡಿರುವ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಸ್ಪಿನ್ನರ್ ಆರ್.ಅಶ್ವಿನ್ ಬೌಲಿಂಗ್ ದಾಳಿಯನ್ನ ಹೊಗಳಿದ್ದಾರೆ.
ಈಗ ಎಲ್ಲರಿಗೂ ಅಶ್ವಿನ್ ಗುಣಮಟ್ಟ ಏನು ಅಂತ ತಿಳಿಯಿತು. ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಆತನ ಗುಣಮಟ್ಟವನ್ನ ಎಲ್ಲರೂ ನೋಡಿದ್ದಾರೆ. ಅವನೊಬ್ಬ ಗುಣಮಟ್ಟದ ಬೌಲರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಚುಟುಕು ಕ್ರಿಕೆಟ್ನಲ್ಲಿ ಹಲವು ಪಂದ್ಯವಾಡಿ ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ಮೂರ್ನಾಲ್ಕು ವರ್ಷದ ಬಳಿಕ ತಂಡಕ್ಕೆ ಮರಳಿ ಈ ರೀತಿ ಪ್ರದರ್ಶನ ನೀಡುವುದು ಆತನಿಗೆ ಸವಾಲಿನ ವಿಷಯವಾಗಿತ್ತು ಎಂದಿದ್ದಾರೆ.
ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನೀವು ಯಾವಾಗ ಬೇಕಾದರು ಆತನ ಕೈಗೆ ಬಾಲ್ ನೀಡಿ ಅಶ್ವಿನ್ ವಿಕೆಟ್ ಪಡೆದು ಮರಳುತ್ತಾನೆ. ಯಾವಾಗಲೂ 6 ಬಾಲ್ ಮುಗಿಸಿ ವಾಪಸಾಗಲು ಇಷ್ಟಪಡುವುದಿಲ್ಲ, ಬದಲಿಗೆ ವಿಕೆಟ್ ಪಡೆಯಲು ಯತ್ನಿಸುತ್ತಾನೆ. ಈಗ ಒಳ್ಳೆಯ ಫಾರ್ಮ್ಗೆ ಮರಳಿದ್ದಾನೆ. ಮುಂದಿನ ಪಂದ್ಯಗಳಿಗೆ ಇದೇ ರೀತಿ ಪ್ರದರ್ಶನ ನೀಡುತ್ತಾನೆ ಎಂಬ ಭರವಸೆ ಇದೆ ಎಂದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ದಾಖಲೆಯ ಜೊತೆಯಾಟವಾಡಿದ್ದರು. ರೋಹಿತ್ ಕೇವಲ 47 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ನೆರವಿನಿಂದ 74 ರನ್ಗಳಿಸಿ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ:ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ; ನಾರಾಯಣಗೌಡ ಅಭಿನಂದನೆ