ಕರಾಚಿ (ಪಾಕಿಸ್ತಾನ): ನಿನ್ನೆ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡ ಭರ್ಜರಿ ಜಯದಾಖಲಿಸಿದೆ. ಈ ನಡುವೆ ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ಖಾಸಗಿ ಟಿವಿ ಶೋವೊಂದರಲ್ಲಿ ಭಾಗಿಯಾಗಿದ್ದ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್ ಶೋ ಮಧ್ಯದಲ್ಲೇ ಹೊರ ನಡೆದಿದ್ದು ಚರ್ಚೆಗೆ ಕಾರಣವಾಗಿದೆ.
ಖಾಸಗಿ ವಾಹಿನಿ ಪಿಟಿವಿಯ ಸ್ಫೋರ್ಟ್ ಅನಾಲಿಸಿಸ್ನಲ್ಲಿ ಭಾಗಿಯಾಗಿದ್ದ ಶೋಯೆಬ್ ಅವರನ್ನು ಕಾರ್ಯಕ್ರಮದ ನಿರೂಪಕ ಹೊರ ನಡೆಯಲು ಸೂಚಿಸಿದ್ದರು. ಅವಮಾನಕ್ಕೊಳಗಾಗಿ ಟಾಕ್ ಶೋ ಅನಾಲಿಸಿಸ್ಗೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ವಿಪರ್ಯಾಸವೆಂದರೆ ಇದೆಲ್ಲಾ ಪ್ರಹಸನ ಕಾರ್ಯಕ್ರಮ ಪ್ರಸಾರದ ವೇಳೆಯೆ ನಡೆದಿದ್ದು, ಟಿವಿ ಶೋ ನಿರೂಪಕನ ನಡೆಗೆ ಆಕ್ರೋಶ ಕೇಳಿ ಬಂದಿದೆ.
ಶೋನಿಂದ ಅಖ್ತರ್ ಹೊರನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮ ನಿರೂಪಕ ನ್ಯೂಮನ್ ನಯಾಜ್ ಹಾಗೂ ಅಖ್ತರ್ ನಡುವಿನ ಸಂಭಾಷಣೆಯ ವಿಡಿಯೋ ಹರಿದಾಡುತ್ತಿದೆ.
ಈ ಬಗ್ಗೆ ಸ್ವತಃ ಶೋಯೆಬ್ ಅಖ್ತರ್ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಕ್ಲಿಪ್‌ಗಳು ಪ್ರಸಾರವಾಗುತ್ತಿವೆ. ಹಾಗಾಗಿ, ನಾನು ಸ್ಪಷ್ಟನೆ ನೀಡಬೇಕೆಂದು ಭಾವಿಸಿದೆ. ಡಾ ನ್ಯೂಮನ್ ಅಸಭ್ಯವಾಗಿ ವರ್ತಿಸಿ ಕಾರ್ಯಕ್ರಮದಿಂದ ಹೊರ ಹೋಗುವಂತೆ ನನ್ನನ್ನು ಕೇಳಿದರು ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.
ಸರ್ ವಿವಿಯನ್ ರಿಚರ್ಡ್ಸ್ ಮತ್ತು ಡೇವಿಡ್ ಗೋವರ್ ಅವರಂತಹ ದಂತಕಥೆಗಳು ಸೆಟ್‌ನಲ್ಲಿದ್ದ ವೇಳೆ ಜೊತೆಗೆ ಲಕ್ಷಾಂತರ ಜನರು ವೀಕ್ಷಿಸುತ್ತಿರುವಾಗ ಈ ಘಟನೆ ನನಗೆ ಮುಜುಗರ ತಂದಿತು. ಆದರೆ, ನ್ಯೂಮನ್ ಕೊನೆಗೆ ಕ್ಷಮೆಯಾಚಿಸುತ್ತಾರೆ ಎಂದುಕೊಂಡೆ. ಆದರೆ, ಹಾಗಾಗಲಿಲ್ಲ. ಇದರಿಂದ ನಾನು ಶೋನಿಂದ ಹೊರ ನಡೆದೆ ಎಂದಿದ್ದಾರೆ.