ಅಬುಧಾಬಿ:ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಇಂದು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಗೇಲ್ ತಮ್ಮ ನಿವೃತ್ತಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೂ ಗೇಲ್ ಅಭಿಮಾನಿಗಳು ಮತ್ತು ಇತರ ಸಿಬ್ಬಂದಿಗೆ ಆಟೋಗ್ರಾಫ್ ನೀಡಿದ್ದು ಇಂತಹ ಹಲವು ಅನುಮಾನಗಳಿಗೆ ಎಡೆಮಾಡಿದೆ. ಆಸೀಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಗೇಲ್ 9 ಎಸೆತಗಳಲ್ಲಿ 2 ಸಿಕ್ಸರ್ ಸೇರಿ 15 ರನ್ ಗಳಿಸಿದ್ದರು.
ಎರಡು ವಿಶ್ವಕಪ್‌ಗಳ ಹೀರೋ
1999ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಗೇಲ್ ವೆಸ್ಟ್ ಇಂಡೀಸ್ ತಂಡಕ್ಕೆ ಎರಡು ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನ್ನೊಂದಿಗೆ ಸುದೀರ್ಘ ಕಾಲ ಆಡಿದ ನಂತರ ನಿವೃತ್ತಿ ಘೋಷಿಸಿದ ಡ್ವೇನ್ ಬ್ರಾವೋ ಅವರೊಂದಿಗೆ ತಮ್ಮ ಕೊನೆಯ ಪಂದ್ಯ ಆಡಲು ತುಂಬಾ ಸಂತೋಷವಾಗಿದೆ ಎಂದು ಗೇಲ್ ಹೇಳಿದ್ದಾರೆ. ಇಂದಿನ ಪಂದ್ಯ ಬ್ರಾವೋ ಅವರಿಗೂ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಗೇಲ್ 79 ಅಂತಾರಾಷ್ಟ್ರೀಯ ಟಿ20ಗಳಲ್ಲಿ 1,899 ರನ್ ಗಳಿಸಿದ್ದಾರೆ. ಇದರಲ್ಲಿ 14 ಅರ್ಧಶತಕಗಳಿವೆ. ತಮ್ಮ ವೃತ್ತಿಜೀವನದಲ್ಲಿ ಒಟ್ಟು 445 ಟಿ20 ಪಂದ್ಯಗಳನ್ನು ಆಡಿ 14,321 ರನ್ ಗಳಿಸಿದ್ದಾರೆ. ಇದರಲ್ಲಿ 22 ಶತಕಗಳು ಸೇರಿವೆ. 2013ರಲ್ಲಿ ಆರ್‌ಸಿಬಿ ಪರ 66 ಎಸೆತಗಳಲ್ಲಿ 175 ರನ್ ಬಾರಿಸಿದ ವಿಶ್ವ ದಾಖಲೆಯನ್ನು ಗೇಲ್ ಹೊಂದಿದ್ದಾರೆ.
ಗೇಲ್ 2014ರಿಂದ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಕೊನೆಯದಾಗಿ 2019ರಲ್ಲಿ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. 103 ಟೆಸ್ಟ್‌ಗಳಲ್ಲಿ 7,214 ರನ್ ಹಾಗೂ 301 ಏಕದಿನ ಪಂದ್ಯಗಳಿಂದ 10,480 ರನ್ ಗಳಿಸಿದ್ದಾರೆ.