ದುಬೈ:ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12ರ ಗ್ರೂಪ್ 2ರಲ್ಲಿಂದು ಬಲಿಷ್ಠ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಸೆಮಿಫೈನಲ್ ಹಾದಿ ಸುಗಮಗೊಳಿಸುವ ಉದ್ದೇಶದಿಂದ ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.
ಈಗಾಗಲೇ ಎರಡು ತಂಡಗಳು ಪಾಕ್ ವಿರುದ್ಧ ಆಡಿರುವ ಪಂದ್ಯದಲ್ಲಿ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ತವಕದಲ್ಲಿವೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ರಾತ್ರಿ 7:30ಕ್ಕೆ ಭಾರತ-ನ್ಯೂಜಿಲ್ಯಾಂಡ್ ಮುಖಾಮುಖಿಯಾಗುತ್ತಿವೆ. ನಿರ್ಣಾಯಕ ಪಂದ್ಯದಲ್ಲಿ ಉಭಯ ತಂಡಗಳು ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಲಿದ್ದು, ಪಾಕಿಸ್ತಾನದ ವಿರುದ್ಧ ಆಡಿರುವ ತಂಡದೊಂದಿಗೆ ಕೊಹ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬದಲಾವಣೆ ಮಾಡಿದ್ರೆ ಸ್ಪಿನ್ನರ್ ಸ್ಥಾನದಿಂದ ವರುಣ್ ಚಕ್ರವರ್ತಿಗೆ ಕೈಬಿಟ್ಟು, ಅಶ್ವಿನ್ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯಾ ಸಂಪೂರ್ಣವಾಗಿ ಫಿಟ್ ಆಗಿರುವ ಕಾರಣ, ಅವರಿಗೆ ಮತ್ತೊಂದು ಚಾನ್ಸ್ ಸಿಗುವ ಸಾಧ್ಯತೆ ಇದೆ.
ಪಾಕ್ ವಿರುದ್ಧ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಇಂದಿನ ಪಂದ್ಯದಲ್ಲಿ ತಿರುಗಿಬಿದ್ದರೆ ಮಾತ್ರ ಮುಂದಿನ ಹಾದಿ ಸರಳವಾಗಲಿದೆ. ಇನ್ನು ನ್ಯೂಜಿಲ್ಯಾಂಡ್ ಕೂಡ ತಾನಾಡಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿದ್ದು, ವಿಶ್ವಕಪ್ನ ಮುಂದಿನ ಹಂತಕ್ಕೆ ಲಗ್ಗೆ ಹಾಕಲು ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಇಂದಿನ ಪಂದ್ಯ ಹೆಚ್ಚು ಕುತೂಹಲ ಮೂಡಿಸಿದೆ.