ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ರಂಪ್ ಕಾರ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾ ಪರ ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಪಾಕ್ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾಗೆ ಮುಂದಿನ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಈಗಾಗಲೇ ಕೊಹ್ಲಿ ಪಡೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಶಾರ್ದೂಲ್ ಠಾಕೂರ್ಗೆ ಮಣೆ ಹಾಕುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ಪಾಕ್ ವಿರುದ್ಧ ಕಣಕ್ಕಿಳಿದಿದ್ದ ತಂಡದೊಂದಿಗೆ ಕೊಹ್ಲಿ ಮೈದಾನಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಕೇವಲ ಒಂದು ಪಂದ್ಯದಲ್ಲಿ ಸೋತ ಕಾರಣಕ್ಕಾಗಿ ಅಥವಾ ಕಳಪೆ ಪ್ರದರ್ಶನ ನೀಡಿದಕ್ಕಾಗಿ ಬೇರೆ ಆಟಗಾರರಿಗೆ ಅವಕಾಶ ನೀಡುವುದು ಸರಿಯಲ್ಲ ಎಂಬ ಮನೋಭಾವ ಟೀಂ ಇಂಡಿಯಾ ಹೊಂದಿದೆ. ಬೇರೆ ಆಟಗಾರರು ಆಡಲು ಸಾಧ್ಯವಾಗದ ಸಂದರ್ಭದಲ್ಲಿ ಮಾತ್ರ ಈ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.