ಶಾರ್ಜಾ:ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರರ ಅದ್ಭುತ ಪ್ರದರ್ಶನದಿಂದ ಎದುರಾಳಿ ತಂಡಕ್ಕೆ ಅದು 190 ರನ್ಗಳ ಗುರಿ ನೀಡಿತು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಕೊನೆಯಲ್ಲಿ ಎಡವಿ 10 ರನ್ಗಳ ಸೋಲು ಕಂಡಿತು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೇಸಿಂಗ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿರುವ ಕಾರಣ ಇಂಗ್ಲೆಂಡ್ ತಂಡ ಹರಿಣಗಳನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಬಳಿಸಿ ಸಂಭ್ರಮಿಸಿತು. ರೀಜಾ ಹೆಂಡ್ರಿಕ್ಸ್ ಕೇವಲ 2 ರನ್ ಸಿಡಿಸಿ ಔಟಾದರು. ಸೌತ್ ಆಫ್ರಿಕಾ 15 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.
ಆದರೆ, ನಂತರ ಕ್ವಿಂಟನ್ ಡಿಕಾಕ್ ಹಾಗೂ ರಸಿ ವ್ಯಾಂಡರ್ ಡಸೆನ್ ಅದ್ಭುತ ಆಟದಿಂದ ಸೌತ್ ಆಫ್ರಿಕಾ ಚೇತರಿಸಿಕೊಂಡಿತು. ಕ್ವಿಂಟನ್ ಡಿಕಾಕ್ 27 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಇತ್ತ ವ್ಯಾಂಡರ್ ಡಸೆನ್ ಹೋರಾಟ ಮುಂದುವರಿಸಿ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ವ್ಯಾಂಡರ್ ಡಸೆನ್‌ಗೆ ಆ್ಯಡಿನ್ ಮಾರ್ಕ್ರಮ್ ಉತ್ತಮ ಸಾಥ್ ನೀಡಿ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು.
ವ್ಯಾಂಡರ್ 60 ಎಸೆತದಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ ಅಜೇಯ 94 ರನ್ ಸಿಡಿಸಿದರು. ಆ್ಯಡಿನ್ 25 ಎಸೆತದಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 52 ರನ್ ಹೊಡೆದರು. ಈ ಮೂಲಕ ಸೌತ್ ಆಫ್ರಿಕಾ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 189 ರನ್ಗಳನ್ನು ಕಲೆ ಹಾಕಿತು. ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ತಂಡಕ್ಕೆ 190 ರನ್ಗಳ ಬೃಹತ್ ಮೊತ್ತದ ಗುರಿ ನೀಡಿತು.
ಇಂಗ್ಲೆಂಡ್ ತಂಡ: ದಕ್ಷಿಣ ಆಫ್ರಿಕಾ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಇಂಗ್ಲೆಂಡ್ ತಂಡ 4.1 ಓವರ್ಗೆ 38 ರನ್ಗಳಿಸಿದ್ದಾಗ ಜೇಸನ್ ರಾಯ್ ಗಾಯದ ಸಮಸ್ಯೆಯಿಂದ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಜೇಸನ್ ರಾಯ್ ಸ್ಥಾನವನ್ನು ಮೊಯಿನ್ ಅಲಿ ತುಂಬಿದರು.
ಕೆಲವೊಂದು ಆಟಗಾರರನ್ನು ಹೊರತು ಪಡಿಸಿ ಇಂಗ್ಲೆಂಡ್ ತಂಡದ ಆಟಗಾರರೆಲ್ಲರೂ ಉತ್ತಮ ಪ್ರದರ್ಶನ ನೀಡಿದರು. ಕೊನೆಯ ಓವರ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 14 ರನ್ಗಳು ಬೇಕಾಗಿದ್ದವು. ಆದರೆ, ದಕ್ಷಿಣ ಆಫ್ರಿಕಾ ತಂಡದ ವೇಗಿ ರಬಾಡ ಉತ್ತಮ ಬೌಲಿಂಗ್ ಮಾಡಿ ಹ್ಯಾಟ್ರಿಕ್ ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಗೆಲುವಿಗೆ ಎಳ್ಳು-ನೀರು ಬಿಟ್ಟರು.
ಇಂಗ್ಲೆಂಡ್ ತಂಡದ ಪರ ಜೇಸನ್ ರಾಯ್ 20 ರನ್, ಬಟ್ಲರ್ 26 ರನ್, ಮೊಯೀನ್ ಅಲಿ 37 ರನ್, ಜಾನಿ ಬೈರ್ಸ್ಟೋವ್ 1 ರನ್, ಡೇವಿಡ್ ಮಲನ್ 33 ರನ್, ಲಿಯಾಮ್ ಲಿವಿಂಗ್ಸ್ಟೋನ್ 28 ರನ್, ಇಯಾನ್ ಮಾರ್ಗನ್ 17 ರನ್, ಕ್ರಿಸ್ ವೋಕ್ಸ್ 7 ರನ್, ಕ್ರಿಸ್ ಜೋರ್ಡಾನ್ 0, ಅದೀಲ್ ರಶೀದ್ 2 ಮತ್ತು ಮಾರ್ಕ್ ವುಡ್ 1 ರನ್ ಗಳಿಸಿ ಅಜೇಯರಾಗಿ ಉಳಿದರು. ಒಟ್ನಲ್ಲಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡ ಇಂಗ್ಲೆಂಡ್ ತಂಡ 179 ರನ್ಗಳನ್ನು ಗಳಿಸಿ ದಕ್ಷಿಣ ಆಫ್ರಿಕಾ ವಿರುದ್ಧ 10 ರನ್ಗಳಿಂದ ಸೋಲು ಕಂಡಿತು.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ ಹ್ಯಾಟ್ರಿಕ್ ವಿಕೆಟ್ಗಳನ್ನು ಕಬಳಿಸಿದ್ರೆ, ಶಂಶಿ ಮತ್ತು ಡ್ವೈನ್ ಪ್ರಿಟೋರಿಯಸ್ ತಲಾ ಎರಡು ವಿಕೆಟ್ಗಳನ್ನು ಪಡೆದು ಮಿಂಚಿದರು. ಅನ್ರಿಚ್ ನಾರ್ಟ್ಜೆ ಒಂದು ವಿಕೆಟ್ ಪಡೆದು ಉತ್ತಮ ಬೌಲಿಂಗ್ ಮಾಡಿದರು. ಈ ಪಂದ್ಯ ದಕ್ಷಿಣ ಆಫ್ರಿಕಾ ತಂಡ ರನ್ ರೇಟ್ ಮೂಲಕ ಗೆದ್ದಿದ್ರೆ ಸೆಮಿಫೈನಲ್ಗೆ ತೆರಳುತ್ತಿತ್ತು. ಆದ್ರೆ ಆಸ್ಟ್ರೇಲಿಯಾ ತಂಡ ರನ್ ರೇಟ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕಿಂತ ಹೆಚ್ಚಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡದ ಸೆಮಿಫೈನಲ್ ಕನಸು ನುಚ್ಚು ನೂರಾಯ್ತು.