ಅಬುಧಾಬಿ: ಆರಂಭಿಕ ಬ್ಯಾಟರ್ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ತಂಡ ನಮೀಬಿಯಾಗೆ 190 ರನ್ಗಳ ಬೃಹತ್ ಗುರಿ ನೀಡಿದೆ. ಇದನ್ನು ಬೆನ್ನತ್ತಿದ್ದ ನಮೀಬಿಯಾ ತಂಡ ರನ್ಗಳಿಂದ ಸೋಲು ಕಂಡಿತು.
ಪಾಕ್ ಇನ್ನಿಂಗ್ಸ್: ಟಾಸ್ ಗೆದ್ದ ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ ರಿಜ್ವಾನ್ ಮತ್ತು ಬಾಬರ್ ಅಜಮ್ ಮೊದಲ ವಿಕೆಟ್ಗೆ 113 ರನ್ಗಳ ಭರ್ಜರಿ ಜೊತೆಯಾಟ ನೀಡಿದರು.
ಬಾಬರ್ ಅಜಮ್ 49 ಎಸೆತಗಳಲ್ಲಿ 7 ಬೌಂಡರಿ ಸಹಿತ 70 ರನ್ಗಳಿಸಿ ಔಟಾದರೆ, ರಿಜ್ವಾನ್ 50 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ ಅಜೇಯ 79 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಮೊಹಮ್ಮದ್ ಹಫೀಜ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 32 ರನ್ಗಳಿಸಿ 190 ರನ್ಗಳ ಬೃಹತ್ ಗುರಿ ನೀಡಲು ನೆರವಾದರು. ನಮೀಬಿಯಾ ಉತ್ತಮ ಬೌಲಿಂಗ್ ಮಾಡಿದರೂ ಕಳಪೆ ಕ್ಷೇತ್ರರಕ್ಷಣೆಯಿಂದ ಸಾಕಷ್ಟು ರನ್ ಬಿಟ್ಟುಕೊಟ್ಟರು. ಡೇವಿಡ್ ವೀಸ್ 31ಕ್ಕೆ1 ಮತ್ತು ಜಾನ್ ಫ್ರಾಲಿಂಕ್ 31ಕ್ಕೆ1 ವಿಕೆಟ್ ಪಡೆದರು.
ನಮೀಬಿಯಾ ಇನ್ನಿಂಗ್ಸ್:ಪಾಕ್ ನೀಡಿದ ಮೊತ್ತವನ್ನ ಬೆನ್ನತ್ತಿದ್ದ ನಮೀಬಿಯಾ ತಂಡ ಮೈಕೆಲ್ ವ್ಯಾನ್ ಲಿಂಗೆನ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಬಳಿಕ ಸ್ಟೀಫನ್ ಬಾರ್ಡ್ ಮತ್ತು ಕ್ರೇಗ್ ವಿಲಿಯಮ್ಸ್ ಜೊತೆಯಾಟ ಸಾಗಿತು.
29 ರನ್ಗಳನ್ನು ಕಲೆ ಹಾಕಿದ್ದ ಸ್ಟೀಫನ್ ಬಾರ್ಡ್ ರನೌಟ್ಗೆ ಬಲಿಯಾದ್ರು. ಬಳಿಕ ಬಂದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಹೆಚ್ಚು ಹೊತ್ತು ಕ್ರಿಸ್ನಲ್ಲಿ ಉಳಿಯದೇ 15 ರನ್ಗಳನ್ನು ಕಲೆ ಹಾಕಿ ಪೆವಿಲಿಯನ್ ಹಾದಿ ಹಿಡಿದರು. ಆಲ್ರೌಂಡರ್ ಆಟಗಾರನಾದ ಡೇವಿಡ್ ವೈಸ್ ಉತ್ತಮ ಪ್ರದರ್ಶನ ನೀಡಿದರು.
31 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 43 ರನ್ಗಳನ್ನು ಕಲೆ ಹಾಕಿ ಮಿಂಚಿದರು. ನಮೀಬಿಯಾ ತಂಡ 20 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 144 ರನ್ಗಳನ್ನು ಗಳಿಸಲು ಮಾತ್ರ ಸಶಕ್ತವಾಯಿತು. ಪಾಕ್ ವಿರುದ್ಧ ನಮೀಬಿಯಾ ತಂಡ 45 ರನ್ಗಳ ಬೃಹತ್ ಮೊತ್ತದಿಂದ ಸೋಲನ್ನಪ್ಪಿತು.
ಪಾಕ್ ಪರ ಹಸನ್ ಅಲಿ, ಇಮಾದ್ ವಾಸಿಂ, ಹಾರಿಸ್ ರೌಫ್ ಮತ್ತು ಶಾದಾಬ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು. ಪಾಕ್ ತಂಡ ಈ ಗೆಲುವಿನ ಮೂಲಕ ಸೆಮಿ ಫೈನಲ್ ಪ್ರವೇಶಿಸಿತು.