ಅಬುಧಾಬಿ:ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಭಾರತ ಇಂದು ತನ್ನ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಮೊದಲ ಜಯ ಗಳಿಸಿದೆ.
ಭಾರತ ಇನ್ನಿಂಗ್ಸ್: ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಪರ ಓಪನರ್ ಆಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ರಾಹುಲ್ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್ಗೆ 140 ರನ್ಗಳ ಜೊತೆಯಾಟವಾಡಿತು.
ಕೇವಲ 47 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ನೆರವಿನಿಂದ ರೋಹಿತ್ ಶರ್ಮಾ 74 ರನ್ಗಳಿಸಿ ಕರಿಂ ಜನತ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕೆ.ಎಲ್.ರಾಹುಲ್ 69 ರನ್ಗಳಿಸಿದಾಗ ನಯಿಬ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ 2 ಸಿಕ್ಸರ್ ನೆರವಿನಿಂದ 69 ರನ್ಗಳಿಸಿದರು.
ಇವರ ವಿಕೆಟ್ ಬಳಿಕ ಒಂದಾದ ರಿಷಬ್ ಪಂತ್ 27* ಹಾಗೂ ಹಾರ್ದಿಕ್ ಪಾಂಡ್ಯ 35* ಜೋಡಿ ಕೇವಲ ನಾಲ್ಕು ಓವರ್ಗಳಲ್ಲಿ 50 ರನ್ಗಳ ಜೊತೆಯಾಟವಾಡಿತು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್ಗಳಿಸಿತು. ಅಫ್ಘನ್ ಪರ ನಯಿಬ್ ಮತ್ತು ಕರಿಂ ಜನತ್ ತಲಾ ಒಂದು ವಿಕೆಟ್ ಪಡೆದರು.
ಅಫ್ಘಾನಿಸ್ತಾನ್ ಇನ್ನಿಂಗ್ಸ್:ಭಾರತ ನಿಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಅಫ್ಘಾನ್ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ಶಹಜಾದ್ ಖಾತೆ ತೆಗೆಯದೇ ಪೆವಿಲಿಯನ್ ಹಾದಿ ಹಿಡಿದರು. ಶಹಜಾದ್ ಔಟಾದ ಬೆನ್ನೆಲ್ಲೆ 13 ರನ್ಗಳನ್ನು ಕಲೆ ಹಾಕಿದ್ದ ಹಜರತುಲ್ಲಾ ಜಜಾಯಿ ಬೂಮ್ರಾಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಬ್ಯಾಟ್ಸ್ಮನ್ಗಳು ಹೆಚ್ಚುಹೊತ್ತು ಕ್ರಿಸ್ನಲ್ಲಿ ನಿಲ್ಲದೇ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ನಬಿ ಮತ್ತು ಕರೀಂ ಜನತ್ 57 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಕೊಂಚ ಆಸರೆಯಾದರು. ಆದ್ರೆ ಅಫ್ಘಾನಿಸ್ತಾನ್ ತಂಡ ನಿಗದಿತ 20 ಓವರ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 144 ರನ್ಗಳನ್ನು ಕಲೆ ಹಾಕಲು ಮಾತ್ರ ಸಾಧ್ಯವಾಯಿತು.
ಅಫ್ಘಾನ್ ಪರ ಮೊಹಮ್ಮದ್ ಶಹಜಾದ್ 0, ಹಜರತುಲ್ಲಾ ಜಜಾಯಿ 13, ರಹಮಾನುಲ್ಲಾ ಗುರ್ಬಾಜ್ 19, ಗುಲ್ಬದಿನ್ ನಾಬ್ 18, ನಜೀಬುಲ್ಲಾ ಜಡ್ರಾನ್ 11, ನಾಯಕ ಮೊಹಮ್ಮದ್ ನಬಿ 35, ರಶೀದ್ ಖಾನ್, ಕರೀಂ ಜನತ್ 42 ಮತ್ತು ಶರಫುದ್ದೀನ್ ಅಶ್ರಫ್ 2 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು.
ಭಾರತದ ಪರ ಮೊಹಮ್ಮದ್ ಶಮಿ 3, ರವಿಚಂದ್ರನ್ ಅಶ್ವಿನ್ 2, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.