ಲಖನೌ: ಜಪಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್ ಹಾಗೂ ಪಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ವಿಶೇಷ ಸಾಮರ್ಥ್ಯ ಪ್ರದರ್ಶಿಸಿ ಅನೇಕ ಪದಕಗಳನ್ನು ಗೆದ್ದು ಜಗತ್ತಿನ ಗಮನ ಸೆಳೆದಿದ್ದರು. ಕ್ರೀಡಾಪಟುಗಳು ದೇಶಕ್ಕೆ ಇನ್ನಷ್ಟು ಪದಕಗಳನ್ನು ತರಬೇಕೆಂದು ಪಣತೊಟ್ಟಿರುವ ಹಲವು ರಾಜ್ಯಗಳು ಇದೀಗ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾಗಿವೆ.
ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಮಹತ್ವದ ಹೆಜ್ಜೆ ಇಟ್ಟಿದೆ. ಯೋಗಿ ನೇತೃತ್ವದ ಸರ್ಕಾರ ರಾಜ್ಯದ 75 ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ. ಇದ್ರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮಿನಿ ಕ್ರೀಡಾಂಗಣಗಳನ್ನು ಸ್ಥಾಪಿಸುವ ಮೂಲಕ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸಲು ಹಾಗೂ ಆಟಗಾರರು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲು ನೆರವಾಗುತ್ತಿದೆ.
ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಾಲೇ 20 ಮಿನಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸುವುದೇ ಇಡೀ ಯೋಜನೆಯ ಉದ್ದೇಶ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.