ರೋಹ್ಟಕ್(ಹರಿಯಾಣ):ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ವಿರೋಧಿಸಿ ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದರೆ, ಭಜರಂಗ್ ಪೂನಿಯಾ ಪದ್ಮಶ್ರೀ ಮತ್ತು ವಿನೇಶ್ ಫೋಗಟ್ ಅವರು ತಮ್ಮ ಖೇಲ್ ರತ್ನ, ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಕುಸ್ತಿಪಟುಗಳ ಈ ನಡೆಯನ್ನು 'ರಾಜಕೀಯ ಪ್ರೇರಿತ' ಎಂದು ಒಲಿಂಪಿಯನ್ ಯೋಗೇಶ್ವರ್ ದತ್ ವಿಶ್ಲೇಷಿಸಿದರು.
ಈ ಪ್ರಶಸ್ತಿಗಳು ಕೇವಲ ಕ್ರೀಡಾಪಟುವಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಸಂದ ಗೌರವ. ಇದರಲ್ಲಿ ಆಟಗಾರ ಮತ್ತು ಅವರ ಕುಟುಂಬದ ಕೊಡುಗೆ ಇದೆ. ಸರ್ಕಾರದ ವಿಷಯದಲ್ಲೂ ಅದೇ ಆಗುತ್ತದೆ. ಇಂಥ ಬೆಳವಣಿಗೆಗಳು ಅತ್ಯಂತ ದುಃಖಕರವಾಗಿದೆ ಎಂದು ಹರಿಯಾಣದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ನಂತರ ಕುಸ್ತಿ ವಿವಾದದ ಕುರಿತಾಗಿ ಯೋಗೇಶ್ವರ್ ದತ್ ಬೇಸರ ವ್ಯಕ್ತಪಡಿಸಿದರು.
ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ: ಕುಸ್ತಿ ಆಟಗಾರರ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ದತ್ ಆರೋಪಿಸಿದ್ದಾರೆ. ಈ ಧಾರಾವಾಹಿಯ ಸ್ಕ್ರಿಪ್ಟ್ ಈಗಾಗಲೇ ಸಿದ್ಧಗೊಂಡಿದೆ. ಲೋಕಸಭೆ ಚುನಾವಣೆವರೆಗೂ ಈ ವಿಷಯವನ್ನು ಮುಂದುವರಿಸಲು ಅವರು ಬಯಸುತ್ತಾರೆ. ರಾಹುಲ್ ಗಾಂಧಿ, ದೀಪೇಂದ್ರ ಹೂಡಾ, ಭೂಪೇಂದ್ರ ಹೂಡಾ ಮತ್ತು ಪ್ರಿಯಾಂಕಾ ಗಾಂಧಿ ಇದರ ಹಿಂದಿದ್ದಾರೆ ಎಂದು ದೂರಿದರು.