ನವದೆಹಲಿ: ಮೂರು ತಿಂಗಳ ಕಾಲ ಕಾದ ನಂತರ ಸ್ಟಾರ್ ಕುಸ್ತಿಪಟುಗಳು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾನುವಾರ ಮತ್ತೆ ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ದೂರು ನೀಡಿದರೂ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟಿಸುತ್ತಿರುವುದಾಗಿ ಹೇಳಿದ್ದಾರೆ.
ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ವಿರುದ್ಧ ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವಾಗ ಸಾಕ್ಷಿ ಮಲಿಕ್ ಮಾಧ್ಯಮಗಳೊಂದಿಗೆ ಮಾತನಾಡಿ," ನಾವು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಎಫ್‌ಐಆರ್ ದಾಖಲಿಸಲು ಬಯಸಿದ್ದೇವೆ. ಎರಡು ದಿನಗಳ ಹಿಂದೆ ನಾವು ದೂರು ದಾಖಲಿಸಿದ್ದೇವೆ. ಆದರೆ, ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. 7 ಮಹಿಳಾ ಕುಸ್ತಿಪಟುಗಳಿದ್ದಾರೆ ಮತ್ತು ಅವರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದಾರೆ" ಎಂದರು.
ಇದು ಸೂಕ್ಷ್ಮ ವಿಷಯ, ತನಿಖೆಯನ್ನು ನಾವು ಬಯಸುತ್ತೇವೆ. ನಮ್ಮ ಆರೋಪವನ್ನು ಸುಳ್ಳು ಎಂದು ಬಿಂಬಿಸಲಾಗುತ್ತಿದೆ. ಎರಡೂವರೆ ತಿಂಗಳಿಂದ ಕಾಯುತ್ತಿದ್ದರೂ ಯಾರೂ ಕೇಳುತ್ತಿಲ್ಲ. ನಾವು ಅಪ್ರಾಪ್ತರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ. ಆಕೆಯ ಹೆಸರು ಮತ್ತು ವೃತ್ತಿ ಹಾಳಾಗುತ್ತದೆ. ನಾವು ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಪದಕ ಗೆದ್ದಿದ್ದೇವೆ ಎಂದು ಸಾಕ್ಷಿ ಮಲಿಕ್ ಜಂತರ್ ಮಂತರ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಬಜರಂಗ್ ಪೂನಿಯಾ, ವಿನೇಶ್ ಫೋಗಟ್, ರವಿ ದಹಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತದ ಪ್ರಮುಖ ಕುಸ್ತಿಪಟುಗಳು ಈ ವರ್ಷದ ಜನವರಿಯಲ್ಲಿ ಜಂತರ್ ಮಂತರ್‌ನಲ್ಲಿ ಧರಣಿ ಪ್ರತಿಭಟನೆ ನಡೆಸಿದರು. ಬ್ರಿಜ್ ಭೂಷಣ್ ಅವರನ್ನು ಕೇಂದ್ರ ಕಚೇರಿಯಿಂದ ತೆಗೆದುಹಾಕಬೇಕು ಮತ್ತು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾವನ್ನು ವಿಸರ್ಜಿಸಬೇಕೆಂದು ಒತ್ತಾಯಿಸಿದರು. ಅವರು ಸಂಸ್ಥೆ ಮತ್ತು ಅದರ ಮುಖ್ಯಸ್ಥರು ಲೈಂಗಿಕ ಕಿರುಕುಳ ಮತ್ತು ಕುಸ್ತಿಪಟುಗಳ ಜೊತೆ ದುರ್ವರ್ತನೆಯ ಬಗ್ಗೆ ಆರೋಪಿಸಿದ್ದರು.