ಟೋಕಿಯೋ: ಶನಿವಾರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ತಮ್ಮ ಸಾಧನೆಯನ್ನು ಇಡೀ ದೇಶಕ್ಕೆ ಅರ್ಪಿಸುವುದಾಗಿ ತಿಳಿಸಿದ್ದು, ತಮ್ಮ ಗೆಲುವಿಗೆ ಹಾರೈಸಿದ ಕೋಟ್ಯಂತರ ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ.
29 ವರ್ಷದ ಮೀರಾಬಾಯಿ ಒಟ್ಟು 202 ಕೆ.ಜಿ (87 ಕೆ.ಜಿ. ಹಾಗೂ 115 ಕೆ.ಜಿ.) ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಪಡೆದರೆ, ಚೀನಾದ ಹೋವ್ ಝಿಹು ಒಟ್ಟು 210 ಕೆ.ಜಿ (91 ಕೆ.ಜಿ ಹಾಗೂ 116 ಕೆ.ಜಿ) ಭಾರವನ್ನು ಎತ್ತಿ ಚಿನ್ನದ ಪದಕ ಪಡೆದರು.
ಚಾನು ಭಾರತದ ಪರ ಬೆಳ್ಳಿ ಗೆದ್ದ ಎರಡನೇ ಮಹಿಳಾ ಕ್ರೀಡಾಪಟು ಮತ್ತು ವೇಟ್ಲಿಫ್ಟಿಂಗ್ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಎರಡನೇ ಭಾರತದ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಗೆದ್ದಿದ್ದರು. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್ 69 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದು ಮೊದಲ ಪದಕವಾಗಿತ್ತು.
" ಇಂದು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ನನ್ನ ಕನಸು ನನಸಾಗಿದೆ. ಈ ಪದಕವನ್ನು ನಾನು ನನ್ನ ಇಡೀ ರಾಷ್ಟ್ರಕ್ಕೆ ಅರ್ಪಿಸುತ್ತೇನೆ. ಈ ಪಯಣದಲ್ಲಿ ನನ್ನ ಗೆಲುವಿಗೆ ಪ್ರಾರ್ಥಿಸಿದ ಕೋಟ್ಯಂತರ ಭಾರತೀಯರಿಗೆ ಧನ್ಯವಾದ ಅರ್ಪಿಸುತ್ತೇನೆ. ವಿಶೇಷವಾಗಿ ನನ್ನ ಕುಟುಂ ಮತ್ತು ನನ್ನ ತಾಯಿಗೆ ಧನ್ಯವಾದ ಹೇಳಬೇಕು. ಅವರು ನನಗಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ ಮತ್ತು ನನ್ನ ಮೇಲೆ ಸಾಕಷ್ಟು ನಂಬಿಕೆಯನ್ನಿಟ್ಟಿದ್ದರು.
ನನ್ನ ಈ ಪಯಣದಲ್ಲಿ ಬೆನ್ನಿಗೆ ನಿಂತು ಸಹಕರಿಸಿದ ಸರ್ಕಾರ, ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ, ರೈಲ್ವೇಸ್, ಒಜಿಒ, ಸ್ಪಾನ್ಸರ್ಸ್ ಮತ್ತು ನನ್ನ ಮಾರ್ಕೆಟ್ ಏಜೆನ್ಸಿ ಎಲ್ಲರ ಬೆಂಬಲ ಅಪಾರವಾಗಿದೆ ಎಂದು ಚಾನು ಟ್ವಿಟರ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ತಮ್ಮ ಜೊತೆಯಾಗಿ ನಿಂತ ಸಾಧನೆಗೆ ಪ್ರಮುಖ ಕಾರಣರಾಗಿರುವ ಕೋಚ್ ವಿಜಯ್ ಶರ್ಮಾ ಮತ್ತು ಎಲ್ಲಾ ಬೆಂಬಲ ಸಿಬ್ಬಂದಿ ನನ್ನನ್ನು ಸಾಕಷ್ಟು ಪ್ರೇರೇಪಿಸಿದ್ದಾರೆ. ನನ್ನ ಸಾಧನೆಗೆ ಇವರೆಲ್ಲರ ಶ್ರಮ ಮಹತ್ವವಾಗಿದೆ. ಇನ್ನು ನನ್ನ ವೇಟ್‌ಲಿಫ್ಟಿಂಗ್ ಕುಟುಂಬಕ್ಕೂ ಮತ್ತು ದೇಶದ ಎಲ್ಲಾ ಜನತೆಗು ಧನ್ಯವಾದ ಅರ್ಪಿಸುತ್ತೇನೆ. ಜೈ ಹಿಂದ್ ಎಂದು ಚಾನು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ:ಮೀರಾಬಾಯಿ ಚಾನು ಪದಕ ಗೆಲ್ಲುವ ವೇಳೆ ಕುಟುಂಬದ ಸಂಭ್ರಮ!