ನವದೆಹಲಿ:ಪೆರುವಿನ ಲಿಮಾದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಈಜು ಸ್ಪರ್ಧೆ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದಿದ್ದ ಅಪೇಕ್ಷಾ ಫರ್ನಾಂಡಿಸ್, ಪದಕದ ನಿರೀಕ್ಷೆ ಮೂಡಿಸಿದ್ದರು. ಆದರೆ, ಅಂತಿಮ ಸುತ್ತಿನ ಹಣಾಹಣಿಯಲ್ಲಿ 8ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು.
ಮಹಿಳೆಯರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ 17 ವರ್ಷದ ಅಪೇಕ್ಷಾ ಫರ್ನಾಂಡೀಸ್ 2 ನಿಮಿಷ 19.14 ಸೆಕೆಂಡ್ನಲ್ಲಿ ಗುರಿ ತಲುಪಿ 8 ನೇಯವರಾಗಿ ಆಟ ಮುಗಿಸಿದರು. ಇದರಿಂದ ಚೊಚ್ಚಲ ಪದಕ ಗೆಲ್ಲುವ ಅವರ ಆಸೆ ಕಮರಿತು. 2 ನಿಮಿಷ 18.18 ಸೆಕೆಂಡ್ನಲ್ಲಿ ಅವರು ಗುರಿ ಮುಟ್ಟುವ ಮೂಲಕ ದಾಖಲೆಯೊಂದಿಗೆ ಫೈನಲ್ ತಲುಪಿದ್ದರು.
ಅಪೇಕ್ಷಾ ಫರ್ನಾಂಡೀಸ್ ಅವರು ಈ ಹಿಂದೆ ಭಾರತದ ಮಟ್ಟಿಗೆ ದಾಖಲೆಯಾದ 2 ನಿಮಿಷ 18.39 ಸೆಕೆಂಡ್ ಅನ್ನು ಮೀರಿದ್ದರು. ಅಲ್ಲದೇ ವಿಶ್ವಕೂಟದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆ ಮಾಡಿದ್ದರು.
ಇನ್ನುಳಿದಂತೆ ಪುರುಷರ 200 ಮೀಟರ್ ಫ್ರೀಸ್ಟೈಲ್ ಹೀಟ್ಸ್‌ನಲ್ಲಿ ಭಾರತದ ವೇದಾಂತ್ ಮಾಧವನ್ ಮಾಡಿದ ಎಡವಟ್ಟಿನಿಂದ ಸ್ಪರ್ಧೆಯಿಂದಲೇ ಅನರ್ಹಗೊಂಡರು. ಇನ್ನೊಂದೆಡೆ ಸಂಭವ್ ರಾಮರಾವ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಅವರು 1 ನಿಮಿಷ 55.71 ಸೆಕೆಂಡ್ ಸಮಯದೊಂದಿಗೆ 27 ನೇ ಸ್ಥಾನ ಪಡೆದರು.
ಓದಿ:ಸೆ.10 ರಿಂದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಇಂಡಿಯಾ ಲೆಜೆಂಡ್ಸ್ಗೆ ಸಚಿನ್ ತೆಂಡೂಲ್ಕರ್ ಸಾರಥ್ಯ