ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹೊಸ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿರುವ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಸೇರಿದಂತೆ ನೋಹ್ ಲೈಲ್ಸ್, ಶಾಕ್ಯಾರಿ ರಿಚರ್ಡ್‌ಸನ್, ಕಾರ್ಸ್ಟನ್ ವಾರ್‌ಹೋಮ್ ಮತ್ತು ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ಜ್ಯೂರಿಚ್ ಡೈಮಂಡ್ ಲೀಗ್ನಲ್ಲಿ ಪ್ರತಿಷ್ಟಿತ ಪ್ರಶಸ್ತಿ ಗೆಲುವಿಗಾಗಿ ತಯಾರಿ ನಡೆಸುತ್ತಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮುಕ್ತಾಯ ಕಂಡ ಬೆನ್ನಲ್ಲೇ ಜ್ಯೂರಿಚ್ ಡೈಮಂಡ್ ಲೀಗ್ ನಡೆಯಲಿದ್ದು, ಅಥ್ಲೆಟಿಕ್ಸ್ ಅಭಿಮಾನಿಗಳು ನೀರಜ್ ಚೋಪ್ರಾ ಪ್ರದರ್ಶನ ಮೇಲೆ ಕಣ್ಣಿಟ್ಟಿದ್ದಾರೆ.
ಬುಧವಾರ (ಆಗಸ್ಟ್ 30) ಮತ್ತು ಗುರುವಾರ (ಆಗಸ್ಟ್ 31) ಜ್ಯೂರಿಚ್ ಡೈಮಂಡ್ ಲೀಗ್ ನಡೆಯಲಿದ್ದು, ಪುರುಷರ ವಿಭಾಗಗಳಲ್ಲಿ 200 ಮೀ, 1500 ಮೀ, 5000 ಮೀ, 400 ಮೀ ಹರ್ಡಲ್ಸ್, ಹೈಜಂಪ್, ಪೋಲ್ ವಾಲ್ಟ್, ಲಾಂಗ್ ಜಂಪ್, ಜಾವೆಲಿನ್ ಥ್ರೋ ಸ್ಪರ್ಧೆಗಳು ನಡೆಯಲಿವೆ. ಮಹಿಳೆಯ ವಿಭಾಗದಲ್ಲಿ 100 ಮೀ, 200 ಮೀ, 800 ಮೀ, 3000 ಮೀ ಸ್ಟೀಪಲ್ ಚೇಸ್, 100 ಮೀ ಹರ್ಡಲ್ಸ್, ಟ್ರಿಪಲ್ ಜಂಪ್, ಪೋಲ್ ವಾಲ್ಟ್ ಸ್ಪರ್ಧೆಗಳು ನಡೆಯಲಿವೆ. ಜ್ಯೂರಿಚ್ ಟ್ರೋಫಿಗಾಗಿ ಮಹಿಳೆಯರ 4x100 ಮೀ ರಿಲೇ ರೇಸ್ ಕೂಡ ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಭಾರತದಿಂದ ಇಬ್ಬರು ಅಥ್ಲೀಟ್ಗಳು ಭಾಗವಹಿಸುತ್ತಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಮೊದಲ ಚಿನ್ನ ಭಾರತಕ್ಕೆ ಗೆದ್ದ ನೀರಜ್ ಚೋಪ್ರಾ ಡೈಮಂಡ್ ಲೀಗ್ನ 11ನೇ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ಸ್ಟಾಕ್ಹೋಮ್ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ 2ನೇ ಸ್ಥಾನ ಗಳಿಸಿದ್ದ ನೀರಜ್, ಈ ವರ್ಷದ ಮೇ ತಿಂಗಳಿನಲ್ಲಿ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಚಿನ್ನ ಗೆದ್ದಿದ್ದರು. ಈಗ ಡೈಮಂಡ್ ಲೀಗ್ನಲ್ಲಿ 2ನೇ ಬಂಗಾರದ ಪದಕ್ಕಕೆ ತವಕಿಸುತ್ತಿದ್ದಾರೆ.