ಯೂಜೀನ್ (ಓರೆಗಾನ್): ಕ್ರಿಕೆಟ್, ಬಾಲಿವುಡ್ ಮತ್ತು ರಾಜಕೀಯ.. ಸಾಮಾನ್ಯವಾಗಿ ಭಾನುವಾರ ಬೆಳಗ್ಗೆ ನೀವು ಲೇಟಾಗಿ ಎದ್ದು ನಿಧಾನವಾಗಿ ದಿನಪತ್ರಿಕೆಯ ಮೇಲೆ ಕಣ್ಣಾಡಿಸುವ ಹೊತ್ತಿಗೆ ಇವೇ ಅತಿ ಹೆಚ್ಚು ಚರ್ಚೆಯಾಗುವ ವಿಷಯಗಳಾಗಿರುತ್ತವೆ. ಆದರೆ ಇತ್ತೀಚೆಗೆ ಈ ಒಂದು ಸಂಪ್ರದಾಯದಲ್ಲಿ ಕೊಂಚ ಬದಲಾವಣೆ ಕಂಡು ಬರುತ್ತಿದೆ. ಯಾಕೆ ಅಂತೀರಾ.. ಅದಕ್ಕೆ ಕಾರಣ ನೀರಜ್ ಚೋಪ್ರಾ.
ಬಹಳ ಹಿಂದಿನ ವಿಷಯವೇನಲ್ಲ.. ಕಳೆದ ಆಗಸ್ಟ್ 7, 2021 ರಂದು ಟೋಕಿಯೊ ಒಲಿಂಪಿಕ್ಸ್ನಲ್ಲಿ ತನ್ನ ಈಟಿಯನ್ನು 87.58 ಮೀಟರ್ ದೂರಕ್ಕೆಸೆದಿದ್ದ ನೀರಜ್, ಭಾರತಕ್ಕೆ ಪ್ರಥಮ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟು ಸಂಭ್ರಮಿಸಿದ್ದರು. ಇಡೀ ರಾಷ್ಟ್ರವೇ ಅವರೊಂದಿಗೆ ಸಂಭ್ರಮಿಸಿತ್ತು. ಅವರ ಒಂದು ಬೈಟ್ಗಾಗಿ ಮಾಧ್ಯಮದವರು ಮುಗಿಬಿದ್ದಿದ್ದರು.
ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದರು. ಜಾಹೀರಾತು ಕಂಪನಿಗಳು ನೀರಜ್ ಹಿಂದೆ ಸಾಲುಗಟ್ಟಿ ನಿಂತಿದ್ದವು. ಇತಿಹಾಸ ರಚಿಸಿದ ಕ್ರೀಡಾಪಟುವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದಿಸಿದ್ದರು.
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಚೋಪ್ರಾ ಮನೆಮಾತಾದರು. ಜಾವೆಲಿನ್ ಥ್ರೋ ಏನೆಂದರೆ ಗೊತ್ತಿಲ್ಲದೇ ಇರುವವರೂ ಕೂಡ ಸಂಭ್ರಮಿಸಿದರು. ಈಗ ಬರುವ ಭಾನುವಾರದಂದು ನೀರಜ್ ಚೋಪ್ರಾ ಮತ್ತೊಂದು ಇತಿಹಾಸ ರಚಿಸಲು ಸಜ್ಜಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ, ಈಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ತಮ್ಮ ಪ್ರಥಮ ಎಸೆತದಲ್ಲಿಯೇ 88.39 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಪೈನಲ್ ಪ್ರವೇಶಿಸಿದ್ದಾರೆ. ಎರಡು ಅರ್ಹತಾ ಗುಂಪುಗಳಲ್ಲಿ ಸ್ಪರ್ಧಿಸುವ 32 ಎಸೆತಗಾರರ ಗುಂಪಿನಲ್ಲಿ ಭಾರತದ ರೋಹಿತ್ ಯಾದವ್ ಕೂಡ ಅಂತಿಮ 12 ರೊಳಗೆ ಸ್ಥಾನ ಪಡೆದರು.
2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಅವರ ಫೈನಲ್ ಶನಿವಾರ ನಡೆಯಲಿದೆ. ಆದಾಗ್ಯೂ, ಇದು ಭಾರತದಲ್ಲಿ ಭಾನುವಾರ ಬೆಳಗ್ಗೆ 7:05 ಕ್ಕೆ ಪ್ರಾರಂಭವಾಗುತ್ತದೆ. ಜಾವೆಲಿನ್ ಥ್ರೋ ಪುರುಷರ ಫೈನಲ್ ಭಾರತದಲ್ಲಿ ಸೋನಿ TEN 2 ಮತ್ತು Sony TEN 2 HD ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.
ಇದನ್ನು ಓದಿ:ಹತ್ತೇ ಸೆಕೆಂಡ್‌ನಲ್ಲಿ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ಗೇರಿದ ನೀರಜ್ ಚೋಪ್ರಾ!