ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋದ ಗ್ರೂಪ್ ಎ ಕ್ವಾಲಿಫೈಯರ್‌ನಲ್ಲಿ ಭಾರತದ 'ಗೋಲ್ಡನ್ ಬಾಯ್' ಖ್ಯಾತಿಯ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರ ಜೊತೆಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಸಾಧಿಸಿದರು. ಈ ಕ್ರೀಡಾಕೂಟ ಆಗಸ್ಟ್ 19 ರಿಂದ ಪಾರಂಭವಾಗಿದ್ದು 27 ರವರೆಗೆ ನಡೆಯಲಿದೆ.
ಪುರುಷರ ಜಾವೆಲಿನ್ ಥ್ರೋದಲ್ಲಿ ಅರ್ಹತೆಗೆ 83 ಮೀಟರ್ ದೂರ ಜಾವೆಲಿನ್ ಎಸೆಯಬೇಕಿತ್ತು. ನೀರಜ್ ತಮ್ಮ ಮೊಲದ ಪ್ರಯತ್ನದಲ್ಲೇ 88.77 ಮೀ ದೂರಕ್ಕೆಸೆದು ಎರಡು ಟೂರ್ನಿಗಳಿಗೂ ಅರ್ಹತೆ ಪಡೆದುಕೊಂಡಿದ್ದಾರೆ. ಈಗಾಗಲೇ ಒಲಿಂಪಿಕ್ಸ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ, ಡೈಮಂಡ್ ಲೀಗ್ ಚಾಂಪಿಯನ್ ಕೂಡಾ ಹೌದು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವುದರಲ್ಲಿ ಎಡವಿದ್ದ ಚೋಪ್ರಾ ಬೆಳ್ಳಿ ಪದಕ ಪಡೆದಿದ್ದರು.
ನೀರಜ್ ಚೋಪ್ರಾ ಅವರೊಂದಿಗೆ ಭಾರತದ ಡಿ.ಪಿ.ಮನು ಮತ್ತು ಕಿಶೋರ್ ಜೆನಾ ಸ್ಪರ್ಧೆಯಲ್ಲಿದ್ದಾರೆ. ಬುಡಾಪೆಸ್ಟ್ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 27 ಆಟಗಾರರು 15 ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.
1983ರಿಂದ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಈವರೆಗೆ ಭಾರತ 2 ಪದಕ ಗೆದ್ದಿದೆ. 2003ರ ಪ್ಯಾರಿಸ್ ವಿಶ್ವಕೂಟದ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಮೊದಲ ಪದಕ ಪಡೆದಿದ್ದರು. ಆ ನಂತರ, ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಅಮೆರಿಕದ ಅಥ್ಲೀಟ್‌ಗಳೇ ವಿಶ್ವಕೂಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಹೆಚ್ಚು ಪದಕ ಬಾಚಿಕೊಂಡಿದ್ದಾರೆ.
ದೂರ ಜಿಗಿತ: ಒಲಿಂಪಿಕ್ ಚಾಂಪಿಯನ್ ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ ನಡೆದ ಫೈನಲ್ನಲ್ಲಿ ಟೆಂಟೊಗ್ಲೋ ಮತ್ತು ಜಮೈಕಾದ ಪಿನಾಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಟೆಂಟೊಗ್ಲೋ ಆರನೇ ಜಿಗಿತದಲ್ಲಿ 8.52 ಮೀಟರ್ ಜಿಗಿದು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಜಮೈಕಾದ ಪಿನಾಕ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಭಾರತದ ಶ್ರೀಶಂಕರ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. ಶ್ರೀಶಂಕರ್ ಕ್ರಮವಾಗಿ 7.74 ಮೀ, 7.66 ಮೀ, 6.70 ಮೀ. ದೂರ ಜಿಗಿದು ಗ್ರೂಪ್ ‘ಎ’ ಅರ್ಹತಾ ಸುತ್ತಿನಲ್ಲಿ 12ನೇ ಹಾಗೂ ಒಟ್ಟಾರೆ 22ನೇ ಸ್ಥಾನ ಪಡೆದರು.
ಇದನ್ನೂ ಓದಿ:ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಇಂದಿನಿಂದ ಅಖಾಡಕ್ಕಿಳಿಯಲಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ