ಕರ್ನಾಟಕ

karnataka

ETV Bharat / sports

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಭಾರತಕ್ಕೆ ಪದಕದ ನಿರೀಕ್ಷೆ.. 90 ಮೀಟರ್​ ಎಸೆಯುವ ಗುರಿಯಲ್ಲಿ ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ನ ಜಾವೆಲಿನ್​ ಥ್ರೋದಲ್ಲಿ ಮೂವರು ಭಾರತೀಯ ಆಟಗಾರರು ಕಣದಲ್ಲಿದ್ದು ನೀರಜ್​ ಚೋಪ್ರಾ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಗೋಲ್ಡನ್ ಬಾಯ್ ನೀರಜ್ 90 ಮೀಟರ್​ ಮೀರಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ.

Neeraj Chopra
Neeraj Chopra

By ETV Bharat Karnataka Team

Published : Aug 27, 2023, 6:27 PM IST

ಬುಡಾಪೆಸ್ಟ್ (ಹಂಗೇರಿ): ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಮತ್ತು ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್​ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ನಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಇಂದು (ಭಾನುವಾರ) ಹಂಗೇರಿಯ ಬುಡಾಪೆಸ್ಟ್‌ನ ರಾಷ್ಟ್ರೀಯ ಅಥ್ಲೆಟಿಕ್ಸ್ ಸೆಂಟರ್​ನಲ್ಲಿ ಫೈನಲ್​ ನಡೆಯಲಿದೆ. ಭಾರತೀಯ ಕಾಲಮಾನ 11:45ಕ್ಕೆ ಸ್ಪರ್ಧೆ ನಡೆಯಲಿದೆ.

ದೋಹಾ ಡೈಮಂಡ್ ಲೀಗ್​ ಪ್ರಶಸ್ತಿ ವಿಜೇತ "ಗೋಲ್ಡನ್ ಬಾಯ್" ನೀರಜ್​ 88.77 ಮೀಟರ್​ ಜಾವೆಲಿನ್​ ಥ್ರೋ ಮಾಡಿ 12 ಆಟಗಾರರನ್ನು ಒಳಗೊಂಡ ಫೈನಲ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ಡೈಮಂಡ್ ಲೀಗ್ ಮತ್ತು ಅಂಡರ್-20 ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ ಗೆದ್ದಿರುವ ನೀರಜ್ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ ಚಿನ್ನದಿಂದ ವಂಚಿತರಾಗಿದ್ದಾರೆ. ಕಳೆದ ವರ್ಷ, 88.13 ಮೀಟರ್​ ಎಸೆದಿದ್ದರು. ಆದರೆ ಆಂಡರ್ಸನ್ ಪೀಟರ್ಸ್ ಅವರು 90.54 ಮೀ ದೂರಕ್ಕೆ ಥ್ರೋ ಮಾಡಿದ್ದರಿಂದ ಅವಕಾಶ ಕೈ ತಪ್ಪಿತ್ತು. ಹೀಗಾಗಿ ಈ ಬಾರಿ 90 ಮೀಟರ್​ ಗಡಿ ದಾಟುವ ಯೋಜನೆಯನ್ನು ನೀರಜ್​ ಹಾಕಿಕೊಂಡಿದ್ದಾರೆ. ಕಳೆದ ವರ್ಷ ಬೆಳ್ಳಿ ಪದಕ ಗೆದ್ದ ನೀರಜ್​ 2003ರ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟರು. 2003ರ ಪ್ಯಾರಿಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದಿದ್ದರು.

ಈ ಬಾರಿ ಪೀಟರ್ಸ್ ಕ್ವಾಲಿಫೈಯರ್​ನಲ್ಲಿ ವಿಫಲರಾಗಿದ್ದಾರೆ. ಇದರಿಂದ ನೀರಜ್​ 90 ಮೀಟರ್​ ಮೀರಿದರೆ ಚಿನ್ನ ಗೆಲ್ಲುವ ಅವಕಾಶ ಹೆಚ್ಚಿದೆ. ಅಲ್ಲದೇ ನೀರಜ್ ವಿಶ್ವದ ಅಗ್ರ ಶ್ರೇಯಾಂಕದ ಜಾವೆಲಿನ್ ಎಸೆತಗಾರನಾಗಿ ಫೈನಲ್‌ಗೆ ಹೋಗುತ್ತಿದ್ದಾರೆ. ಆದರೆ ನೀರಜ್​ಗೆ ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್, ಪಾಕಿಸ್ತಾನದ ಅರ್ಷದ್ ನದೀಮ್, ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಕಣದಲ್ಲಿ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದೆ.

2023 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಮನು ಡಿಪಿ ಮತ್ತು ಕಿಶೋರ್ ಜೆನಾ ಕೂಡ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಮೂವರು ಭಾರತೀಯ ಆಟಗಾರರು ಒಟ್ಟಿಗೆ ಫೈನಲ್ ಆಡಲಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023: ಪುರುಷರ ಜಾವೆಲಿನ್ ಥ್ರೋ ಫೈನಲಿಸ್ಟ್​ಗಳ ಪಟ್ಟಿ

ಆಲಿವರ್ ಹೆಲಾಂಡರ್ (ಫಿನ್​ಲ್ಯಾಂಡ್​)

ಜಾಕುಬ್ ವಡ್ಲೆಜ್ (ಜೆಕ್​ ಗಣರಾಜ್ಯ)

ಡೇವಿಡ್ ವೆಗ್ನರ್ (ಪೋಲ್ಯಾಂಡ್​)

ನೀರಜ್ ಚೋಪ್ರಾ (ಭಾರತ)

ಆಂಡ್ರಿಯನ್ ಮರ್ಡೇರೆ (ಮೊಲ್ಡೊವಾ)

ಇಹಾಬ್ ಅಬ್ದೆಲ್ರಹ್ಮಾನ್ (ಈಜಿಪ್ಟ್​​)

ಅರ್ಷದ್ ನದೀಮ್ (ಪಾಕಿಸ್ತಾನ)

ಮನು ಡಿಪಿ (ಭಾರತ)

ಎಡಿಸ್ ಮಾಟುಸೆವಿಸಿಯಸ್ (ಲಿಥುವೇನಿಯ)

ಜೂಲಿಯನ್ ವೆಬರ್ (ಜರ್ಮನಿ)

ಕಿಶೋರ್ ಜೆನಾ (ಭಾರತ)

ತಿಮೋತಿ ಹರ್ಮನ್ (ಬೆಲ್ಜಿಯಂ) (ಎಎನ್​ಐ)

ಇದನ್ನೂ ಓದಿ:Mann Ki Baat: 104ನೇ ಸಂಚಿಕೆಯ ಮನ್​ ಕಿ ಬಾತ್​.. ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಆಟಗಾರರಿಗೆ ಮೋದಿ ಪ್ರಶಂಸೆ

ABOUT THE AUTHOR

...view details